ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಬದ್ಧ; ಸಚಿವ ಎಂ.ಬಿ. ಪಾಟೀಲ

M B PATIL IN MADAGUNAKI
ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು.
Published on

ವಿಜಯಪುರ: ಬಬಲೇಶ್ವರ ವಿಧಾನ ಸಭೆ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸಲು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಮದಗುಣಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ 0 ರಿಂದ 5 ಕಿ.ಮೀ. ವರೆಗಿನ 4 ಕೋಟಿ ರೂ. ವೆಚ್ಚದ ಶೇಗುಣಸಿ, ಮದಗುಣಕಿ, ಕೊಡಬಾಗಿ, ತಾಜಪುರ ಹಾಗೂ ಮಂಗಳೂರು ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿ ಪೂಜೆ ಹಾಗೂ 2024-25ನೇ ಸಾಲಿನ ಕೆಎಸ್‌ಐಐಸಿ ಸಿ.ಆರ್. ಅನುದಾನದಲ್ಲಿ ಮದಗುಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 5 ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಶಿಕ್ಷಣ, ಯುವಕರಿಗೆ ಉದ್ಯೋಗ, ರಸ್ತೆ ಅಭಿವೃದ್ಧಿ, ನೀರಾವರಿ, ವಿದ್ಯುತ್ ಸೌಲಭ್ಯ ಸೇರಿದಂತೆ ಎಲ್ಲ ಮೂಲ ಅವಶ್ಯಕತೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ದಶಕಗಳ ಕನಸಾಗಿದ್ದ ಮಮದಾಪುರ ಕೆರೆ ತುಂಬುವುದು, ಹೂಳು ತೆಗೆಯುವ ಕಾರ್ಯ ಕೈಗೊಳ್ಳಲಾಗಿದೆ. ಕೆರೆಗಳಲ್ಲಿ ನೀರು ತುಂಬಿಸಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಕುಡಿಯುವ ನೀರು, ಶಿಕ್ಷಣ, ಯುವಕರಿಗೆ ಉದ್ಯೋಗ, ರಸ್ತೆ ಅಭಿವೃದ್ಧಿ, ನೀರಾವರಿ, ವಿದ್ಯುತ್ ಸೌಲಭ್ಯ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಿಎಸ್‌ಆರ್ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಶಾಲಾ ಕೊಠಡಿಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ವಹಿಸಲಾಗಿದೆ. ಹೈಯರ್ ಸೆಕೆಂಡರಿ ಶಾಲೆಗಳಿಗೂ ಸಿಎಸ್‌ಆರ್ ಅನುದಾನ ಬಳಸಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದರು.

ಅರ್ಜುಣಗಿ, ಕುಮಠೆ, ತೊದಲಬಾಗಿ, ಹೆಬ್ಬಾಳಟ್ಟಿ, ತಿಗಣಿಬಿದರಿ, ನಾಗರಾಳ, ಗದ್ಯಾಳ, ಗೋಠೆ, ಯಕ್ಕುಂಡಿ, ವಕ್ಕುಂಡಿ, ನಿಡೋಣಿ, ಶೇಗುಣಸಿ ಗ್ರಾಮಗಳ 30 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಒದಗಿಸುವ 5ಎ-5ಬಿ ಏತ ನೀರಾವರಿ ಯೋಜನೆ ಹಾಗೂ ಬಬಲೇಶ್ವರ ವಿತರಣಾ ಕಾಲುವೆ ನಂ. 15ರ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದ ಅವರು, ಈ ಭಾಗದಲ್ಲಿ ನೀರಾವರಿಯಿಂದ ಅತಿ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿರುವುದನ್ನು ಮನಗಂಡು, ನೀರಾವರಿಯಷ್ಠೇ ವಿದ್ಯುತ್ ಪೂರೈಕೆಗೆ ಒತ್ತು ನೀಡಲಾಗುತ್ತಿದೆ. 10 ಕೋಟಿ ರೂ. ವೆಚ್ಚದಲ್ಲಿ ಬಬಲಾದ ಹಲಗಣಿ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.

ಮಮದಾಪುರದ ಅಭಿನವ ಮುರುಘೇಂದ್ರ ಮಹಾಸ್ವಾಮೀಜಿ ಹಾಗೂ ಶಿವಾನಂದ ಮಹಾಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net