

ಕೋಲಾರ: ಮಲೇರಿಯಾಮುಕ್ತ ಕರ್ನಾಟಕಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾಗಿದ್ದು, ರಾಜ್ಯವನ್ನು 2030 ರೊಳಗೆ ರೋಗಮುಕ್ತಗೊಳಿಸುವ ಗುರಿ ಹೊಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ತಿಳಿಸಿದರು.
ಜಿಲ್ಲೆಯ ಎಸ್ಎನ್ಆರ್ ಆಸ್ಪತ್ರೆ ಆವರಣದಲ್ಲಿ ವಿಶ್ವ ಮಲೇರಿಯಾ ದಿನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಮಲೇರಿಯಾ ದಿನವನ್ನು "ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ, ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ಮಾಡೋಣ' ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ ಎಂದರು.
ಮಲೇರಿಯಾ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೆ,ರೋಗ ಪೂರ್ಣ ತಡೆಗಟ್ಟಬಹುದು. ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳ ಸಹಕಾರ ಸಿಗುವಂತೆ ಕ್ರಮವಹಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುತ್ತದೆ. ಇದು ಸೋಂಕಿತ ಅನಾಫಿಲೀಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಾದ್ದಾಗಿದ್ದು, ರೋಗದ ಲಕ್ಷಣಗಳೆಂದರೆ ವಿಪರೀತ ಚಳಿ, ಬಿಟ್ಟು ಬಿಟ್ಟು ಜ್ವರ ಮೈಕೈನೋವು, ತಲೆನೋವು, ವಾಕರಿಕೆ ಮುಖ್ಯವಾದವು ಎಂದು ವಿವರಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಜಗದೀಶ್ ಮಾತನಾಡಿ, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದ್ದು, ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಲಾಗುವುದು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ರವಿಕುಮಾರ್ ಮಾತನಾಡಿ, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಇತರೆ ಸೊಳ್ಳೆ ನಿರೋಧಕಗಳನ್ನು ಬಳಸುವುದು. ಕೆರೆ, ಕುಂಟೆ, ಬಾವಿಗಳಿಗೆ ಲಾರ್ವಹಾರಿ ಮೀನುಗಳನ್ನು ಬಿಟ್ಟು ವೃದ್ಧಿಮಾಡುವುದು. ಆರೋಗ್ಯ ಇಲಾಖೆ ಕೈಗೊಳ್ಳುವ ಕೀಟನಾಶಕ ಸಿಂಪಡಣೆ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದು. ಸೊಳ್ಳೆ ನಿಯಂತ್ರಣಕ್ಕಾಗಿ ಪರಿಸರ ಸ್ನೇಹ ವಿಧಾನ ಜೈವಿಕ ನಿಯಂತ್ರಣದಡಿಯಲ್ಲಿ ಬೇವಿನ ಸೊಪ್ಪು ಹೊಗೆ ಹಾಕುವುದು ಒಳ್ಳೆಯದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಿಗದಿತ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ವೇಳೆಯಲ್ಲಿ ಕಂಡು ಬರುವ ಎಲ್ಲ ಜ್ವರದ ಪ್ರಕರಣಗಳಿಗೆ ರಕ್ತ ಲೇಪನಗಳನ್ನು ಸಂಗ್ರಹಿಸಿ ಮಲೇರಿಯಾ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದರು.
ಜಿಲ್ಲಾಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಪ್ಯಾರಾ ಮೆಡಿಕಲ್ ತರಬೇತಿ ವಿದ್ಯಾರ್ಥಿಗಳು ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆ ಆವರಣದಿಂದ ಜಾಥಾ ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮುಂಜಾಗ್ರತ ಕರಪತ್ರಗಳನ್ನು ವಿತರಿಸಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ನಗರದ ಬಾಲಕರ ಕಾಲೇಜು ಸಮೀಪ, ಸರ್ವಜ್ಞ ಪಾರ್ಕ್ ಮುಂಭಾಗ, ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರಿವು ಮೂಡಿಸಲಾಯಿತು.