ಫಲಿತಾಂಶ ಸುಧಾರಣೆಗೆ ಸಂಕಲ್ಪ

23 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಈ ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಯೇ ನಮ್ಮ ಸಂಕಲ್ಪವಾಗಿದೆ. ಫಲಿತಾಂಶ ಗುಣಮಟ್ಟ ಸುಧಾರಣೆಗೆ ಈಗಾಗಲೇ ಎಲ್ಲ ರೀತಿಯ ಪ್ರಯತ್ನ ನಡೆದಿದೆ ಎಂದು ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕರ ಹೇಳಿದರು.
ನಗರದ ಆರ್.ಎನ್. ಶೆಟ್ಟಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾದರಿ ಪರೀಕ್ಷೆ ವೀಕ್ಷಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಈಗಾಗಲೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕರು ಸೇರಿ ಮೊದಲ ಸೆಮಿಸ್ಟರ್ ಅಂತ್ಯದಲ್ಲಿ ನಡೆಸಿದ ಪರೀಕ್ಷೆ ಫಲಿತಾಂಶ ವಿಶ್ಲೇಷಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲಾವಾರು ಸಂಗ್ರಹಿಸಿ ಶಾಲೆಗಳಿಗೆ ವೈಯಕ್ತಿಕ ಹಾಗೂ ತಂಡಗಳನ್ನು ಒಳಗೊಂಡು ಶೈಕ್ಷಣಿಕ ಸಂದರ್ಶನ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ಜತೆಗೆ ಸ್ವ ಸಾಮರ್ಥ್ಯದಿಂದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
ಆಯ್ದ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಥೆಯಿಂದ 40 ಅಂಕದ ವಿಷಯವಾರು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗಳ ಮೌಲ್ಯಮಾಪನ ಬಳಿಕ ವಿಶ್ಲೇಷಿಸಿ ವಿದ್ಯಾರ್ಥಿಗಳು ಯಾವ ಕಲಿಕಾಂಶಗಳಲ್ಲಿ ಸಮರ್ಪಕವಾಗಿ ಉತ್ತರಿಸಲು ವಿಫಲವಾಗಿದ್ದಾರೆ ಎಂಬುದನ್ನು ಅರಿತು ಎಲ್ಲ ಶಾಲೆಗಳಿಗೆ ಜ್ಞಾಪನದ ಮೂಲಕ ಶಿಕ್ಷಕರಿಗೆ ನೀಡಲಾಗಿದೆ ಎಂದರು.
ತಾಲೂಕುವಾರು 4 ತಿಂಗಳ ಹಿಂದೆ ಪ್ರೌಢ ಶಾಲೆ ಮುಖ್ಯಾಧ್ಯಾಪಕರ ಕಾರ್ಯಾಗಾರ ನಡೆಸಿ ಮಾರ್ಗದರ್ಶನ ಮಾಡಲಾಗಿದೆ. ಕಲಿಕಾ ಫಲ ಮತ್ತು ಕಲಿಕಾಂಶಗಳನ್ನು ಸುಧಾರಿಸಲು ಹಾಗೂ ಕಳೆದ ವರ್ಷದ ಸರ್ಕಾರಿ ಪ್ರೌಢ ಶಾಲೆಗಳ ಫಲಿತಾಂಶ ವಿಶ್ಲೇಷಣೆ ಆಧಾರದಲ್ಲಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ ಫಲಿತಾಂಶ ಸುಧಾರಣೆಗೆ ತರಬೇತಿ ನೀಡಲಾಗಿದೆ ಎಂದರು.
ಗಣಿತ ಮತ್ತು ವಿಜ್ಞಾನ ವಿಷಯದ ಕುರಿತು ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಎಸ್ಸೆಸ್ಸೆಲ್ಸಿ ಜಿಲ್ಲಾ ನೋಡೆಲ್ ಅಧಿಕಾರಿ ಮತ್ತು ಹಿರಿಯ ಉಪನ್ಯಾಸಕ ಎ.ಎ.ಖಾಜಿ, ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ, ಶಿಕ್ಷಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net