ಬಡವರ ಆರೋಗ್ಯ ಸಂರಕ್ಷಣೆಗೆ ಸಂಕಲ್ಪ

h24-Health Camp
Published on

ಹುಬ್ಬಳ್ಳಿ: ಶ್ರೀ ಸಿದ್ದಾರೂಢ ಸ್ವಾಮಿಗಳು ಅಡಿಗಲ್ಲು ಹಾಕಿರುವ ಆಸ್ಪತ್ರೆಯೀಗ, ಲಕ್ಷಾಂತರ ಜನರ ಆರೋಗ್ಯ ಸಂಜೀವಿನಿಯಾಗಿ ಬೆಳೆದು ನಿಂತಿದೆ. ಇನ್ನಷ್ಟು ಜನರ ಆರೋಗ್ಯ ಸುಧಾರಿಸುವತ್ತ ಮಹತ್ವದ ನಿರ್ಧಾರಗಳನ್ನು ತೆಗೆದಕೊಳ್ಳುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ದಿ ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆ, ಕೆಎಲ್‌ಇ ಜೆಜಿಎಂಎ ಮೆಡಿಕಲ್ ಕಾಲೇಜ್ ಹಾಗೂ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ವತಿಯಿಂದ ನಗರದ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
1923ರಲ್ಲಿ ಸದ್ಗುರು ಸಿದ್ದಾರೂಢಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದರು. ಇದರ ಕುರುಹು ಇನ್ನೂ ಆಸ್ಪತ್ರೆಯಲ್ಲಿದೆ. ಈ ಮೂಲಕವೇ ಸದ್ಗುರುವಿನ ಆಶೀರ್ವಾದ ಎಂತಹದೆಂಬುದನ್ನು ನಾವೆಲ್ಲರೂ ನೋಡಬಹುದು ಎಂದರು.
ಅತ್ಯಂತ ಪುರಾತನ ಆಸ್ಪತ್ರೆ ಇದಾಗಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಈ ಆಸ್ಪತ್ರೆಗೆ ಶಂಕರಣ್ಣ ಮುನವಳ್ಳಿ ಸೇರಿದಂತೆ ಅನೇಕರು ಕಾಯಕಲ್ಪ ಕಲ್ಪಿಸಿದ್ದಾರೆ. ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಮಾತ್ರವಲ್ಲದೇ ಔಷಧಿಯನ್ನೂ ಉಚಿತವಾಗಿ ಪೂರೈಸಲಾಗುತ್ತಿದೆ. ಈ ಆಸ್ಪತ್ರೆಯು ಬಡವರ ಆರೋಗ್ಯ ಸಂರಕ್ಷಣೆಗೆ ಸಂಕಲ್ಪ ತೊಟ್ಟಿದೆ ಎಂದರು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, 1923ರಲ್ಲಿ ಸದ್ಗುರು ಶ್ರೀ ಸಿದ್ಧಾರೂಢರು ಆಸ್ಪತ್ರೆಗೆ ಅಡಿಗಲ್ಲ ಹಾಕಿದ್ದಾರೆ. ಇದೊಂದೇ ಕಾರಣಕ್ಕೆ ಆಸ್ಪತ್ರೆ ಈವರೆಗೂ ಉಳಿದುಕೊಂಡಿದೆ. ಡಾ. ಪ್ರಭಾಕರ ಕೋರೆ ಅವರು ಸುತ್ತಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ಮುಂದಾಗಿದ್ದಾರೆ. ಕೆಎಲ್‌ಇ ಆಸ್ಪತ್ರೆ ಹುಬ್ಬಳ್ಳಿ ಅಥವಾ ಬೆಳಗಾವಿಯಿಂದ ಸಂಪೂರ್ಣ ಉಚಿತವಾಗದಿದ್ದರೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಪ್ರತಿ ತಿಂಗಳು ಉಚಿತ ನೇತ್ರ ತಪಾಸಣೆ ಮಾಡಲಾಗುತ್ತಿದೆ ಎಂದರು.
ಆಸ್ಪತ್ರೆಯ ಆಡಳಿತ ಮಂಡಳಿ ಸದಸ್ಯ ಲಿಂಗರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀ ಮಠದ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್ ಮಾತನಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರ ಜನ್ಮದಿನ ನಿಮಿತ್ತ ಆಸ್ಪತ್ರೆ ಹಾಗೂ ಶ್ರೀಮಠದಿಂದ ಸನ್ಮಾನಿಸಿ ಶುಭಾಶಯ ಕೋರಲಾಯಿತು.
ಆಸ್ಪತ್ರೆ ಆಡಳಿತ ಮಂಡಳಿ ಅಧ್ಯಕ್ಷ ವಿಜಯ ಶೆಟ್ಟರ್, ಸರ್ವಮಂಗಳಾ ಪಾಠಕ, ಡಾ. ಗೋವಿಂದ ಮಣ್ಣೂರ, ಜಿ.ಎಸ್. ನಾಯಕ, ಬಾಳು ಮಗಜಿಕೊಂಡಿ, ಮಂಜುನಾಥ ಮುನವಳ್ಳಿ, ಡಾ.ಎಂ.ಜಿ. ಹಿರೇಮಠ, ಡಾ.ವೈ.ಎ್. ಹಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net