

ವಿಜಯಪುರ: ಬಾಲಕಾರ್ಮಿಕ ಪದ್ಧತಿ ಅನಿಷ್ಟ ಪದ್ಧತಿ. ಇದನ್ನು ಸಂಪೂರ್ಣ ನಿಮೂರ್ಲನೆ ಮಾಡಲು ಪಣ ತೊಡಿ ಎಂದು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಹೇಳಿದರು.
ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಟಕಗಳ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಾಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಮಕ್ಕಳು ತಪ್ಪದೆ ಶಿಕ್ಷಣ ಪಡೆಯಬೇಕು. ದೇಶದ ಭವಿಷ್ಯ ಇಂದಿನ ಮಕ್ಕಳ ಮೇಲೆ ಅವಲಂಬಿತವಾಗಿದೆ. ಶಿಕ್ಷಣದಿಂದಲೇ ಬೆಳೆವಣಿಗೆ ಸಾಧ್ಯ. ಪಾಲಕರು ತಮ್ಮ ಮಕ್ಕಳನ್ನು ಯಾವುದೇ ರೀತಿಯ ಕೆಲಸಕ್ಕೆ ತಳ್ಳಬಾರದು. ಹಾಗೆಯೇ ಉದ್ಯೋಗದಾತರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಅಥವಾ ಶ್ರಮದಾಯಕ ಕೆಲಸಗಳಿಗೆ ನೇಮಿಸಿದರೆ, ಅದು ಅಪರಾಧವಾಗುತ್ತದೆ ಎಂದರು.
ವಿವಿಯ ಕಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ನಮ್ಮ ಸುತ್ತಲಿನ ಸ್ಥಳಗಳಲ್ಲಿ ಯಾವುದೇ ರೀತಿಯ ಬಾಲಕಾರ್ಮಿಕರು ಕಂಡುಬಂದಲ್ಲಿ, ಅವರಿಗೆ ಕೆಲಸ ನೀಡಿದ ಮಾಲೀಕರಿಗೂ ಪೋಷಕರಿಗೂ ತಿಳುವಳಿಕೆ ನೀಡಿ, ಆ ಮಗುವಿಗೆ ಶಾಲೆಗೆ ಸೇರಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರಮಾಣ ವಚನ ಬೋಧಿಸಲಾಯಿತು. ವಿವಿ ಸ್ಥಾನಿಕ ಅಭಿಯಂತರ ಮಾರುತಿ ಕದಂ, ರಮೇಶ ಸೋನಕಾಂಬಳೆ, ಚಂದ್ರಶೇಖರ ಮಠಪತಿ, ಅಶೋಕಕುಮಾರ ಸುರಪುರ, ಅಮರನಾಥ ಪ್ರಜಾಪತಿ ಮತ್ತಿತರರಿದ್ದರು. ಪ್ರೊ. ವಿಷ್ಣು ಶಿಂದೆ ಸ್ವಾಗತಿಸಿದರು. ಕಲಾವತಿ ಕಾಂಬಳೆ ನಿರೂಪಿಸಿದರು. ಗುಲಾಬ ರಾಠೋಡ ವಂದಿಸಿದರು.