ಕೂಡಿ ಬಾಳುವ ಸ್ನೇಹ ಸಂಕಲ್ಪ ಮಾಡಿ

28 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಯಾವುದೋ ಸೀಮಿತ ದೃಷ್ಟಿಕೋನದ ಕುಬ್ಜ ಕಕ್ಷೆಗೆ ಒಳಪಟ್ಟು ಬೆಳೆಯದೆ, ಸಕಲ ಜೀವಾತ್ಮರನ್ನೂ ಪ್ರೀತಿಸುವ ವಿಶಾಲ ಮನೋಭೂಮಿಕೆಯ ಕೂಡಿ ಬಾಳುವ ಸ್ನೇಹ ಸಂಕಲ್ಪ ಮಾಡಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕಾಮನಕಟ್ಟಿ ಬಳಿಯ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಆವರಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಚರಮತಿಮಠ ಇಂಟರ್‌ನ್ಯಾಷನಲ್ ಎಲೈಟ್ ಕಿಂಡರ್‌ಗಾರ್ಟನ್ ವಿಶೇಷ ಕಲಿಕಾ ವರ್ಗವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ನೆಲದಲ್ಲಿ ಸರ್ವ ಧರ್ಮಿಯರೂ ಬದುಕಲು ಅವಕಾಶವಿದ್ದು, ಭಾರತದ ಐಕ್ಯ ಮಂತ್ರದ ಉನ್ನತ ಪರಂಪರೆಯನ್ನು ವಿದ್ಯಾರ್ಥಿಗಳು ಅರಿಯಬೇಕು. ಒಂದಿಲ್ಲೊಂದು ಹೊಸ ಕಲಿಕಾ ಸಂಗತಿ ಸಂಯೋಜಿಸುತ್ತಿರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಉತ್ಕೃಷ್ಟ ಮಾನವ ಸಂಪನ್ಮೂಲವನ್ನು ರಾಷ್ಟ್ರ ಸೇವೆಗೆ ಒದಗಿಸಲು ಚಿಂತನೆ ನಡೆಸಬೇಕು ಎಂದರು.
ವೈಶುದೀಪ ಫೌಂಡೇಷನ್ ಅಧ್ಯಕ್ಷೆ ಶೀವಲೀಲಾ ವಿನಯ ಕುಲಕರ್ಣಿ ಮಾತನಾಡಿ, ಮಹಿಳೆಯರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಬೇಕು. ಹಾಗಾಗಿ ನಮ್ಮ ಪಾಲಕರು ಮತ್ತು ಪೋಷಕರು ಹೆಣ್ಣು ಮಕ್ಕಳಿಗೂ ಸ್ನಾತಕೋತ್ತರ ಮಟ್ಟದವರೆಗೂ ಜ್ಞಾನಾರ್ಜನೆಗೆ ಅವಕಾಶ ನೀಡಬೇಕು ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಗುರುಮೂರ್ತಿ ಯರಗಂಬಳಿಮಠ, ಪ್ರಾಚಾರ್ಯೆ ಅಶ್ವಿನಿ ಚಿಕ್ಕಬಳ್ಳಾಪೂರ, ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಎಆರ್‌ಸಿ ಪ್ರತಿಷ್ಠಾನದ ನಿರ್ದೇಶಕಿ ಸುಜಾತಾ ಚರಂತಿಮಠ, ಪಕ್ಷಿ ತಜ್ಞ ಪ್ರಕಾಶ ಗೌಡರ, ನ್ಯಾಯವಾದಿ ಭೈರವ ಚರಂತಿಮಠ, ಶಾಲೆ ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ, ಇತರರು ಇದ್ದರು.
ನಂತರ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net