

ಕೋಲಾರ: ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಇತರೆ ಇಲಖಾಧಿಖಾರಿಗಳು ಕೈ ಜೋಡಿಸಿ ಕುಷ್ಠರೋಗಮುಕ್ತ ಕೋಲಾರ ಜಿಲ್ಲಾ ನಿರ್ಮಾಣ ಮಾಡಲು ಸಂಕಲ್ಪ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಕುಷ್ಠರೋಗ ನಿಮೂರ್ಲನಾ ಕಾರ್ಯಕ್ರಮದಡಿ ಫೆ.13ರ ವರೆಗೆ ನಡೆಯಲಿರುವ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವೈದ್ಯರು ಮತ್ತು ಸಿಬ್ಬಂದಿ 15 ದಿನಗಳ ಕಾಲ ಶಾಲೆ, ಆಸ್ಪತ್ರೆ, ಹಾಸ್ಟೆಲ್ ಸೇರಿ ಸಾರ್ವಜನಿಕ ಸ್ಥಳದಲ್ಲಿ ಜನರಲ್ಲಿ ಅರಿವು ಮೂಡಿಸುವ ಜತೆಗೆ ರೋಗಿಗಳು ಕಂಡುಬಂದಲ್ಲಿ ಚಿಕಿತ್ಸೆಗೆ ಒಳಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ, ಕಳೆದ ವರ್ಷ ಜಿಲ್ಲೆಯಲ್ಲಿ 13 ಮಂದಿಯಲ್ಲಿ ರೋಗ ಪತ್ತೆಯಾತ್ತು. ಮುಳಬಾಗಲು ತಾಲೂಕಿನಲ್ಲಿ ಗರಿಷ್ಠ 6 ಪ್ರಕರಣ ಪತ್ತೆಯಾದರೆ, ಶ್ರೀನಿವಾಸಪುರ ತಾಲೂಕಿನಲ್ಲಿ 1, ಮಾಲೂರು, ಕೋಲಾರ, ಕೆಜಿಎ್ನಲ್ಲಿ ತಲಾ 2 ಪ್ರಕರಣ ದೃಢಪಟ್ಟಿದ್ದು, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಜಗದೀಶ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್ಕುಮಾರ್, ಜಿಲ್ಲಾ ಶಸ್ತ್ರ್ರಚಿಕಿತ್ಸಕಿ ಡಾ.ಮಮತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ, ಆರ್ಸಿಎಚ್ಒ ಡಾ.ಚಾರಿಣಿ ಹಾಜರಿದ್ದರು.
ಬಂಗಾರಪೇಟೆ ಮುಕ್ತ
ಜಿಲ್ಲೆಯಲ್ಲಿ ಬಂಗಾರಪೇಟೆ ಇದೀಗ ಕುಷ್ಠಮುಕ್ತವಾಗಿದ್ದು. ಜಿಲ್ಲೆಯನ್ನು ಇದೇ ರೀತಿ ಮಾದರಿಯಾಗಿ ಮಾಡಲು ಪಣತೊಡಲಾಗಿದೆ. ಅಗತ್ಯವುಳ್ಳ ರೋಗಿಗಳಿಗೆ ದಾನಿಗಳ ನೆರವಿನಿಂದ ಚಪ್ಪಲಿ, ಬೆಡ್ಶೀಟ್ ಮತ್ತು ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ವಿವಿಧ ಇಲಾಖೆಗಳ ಸಹಯೋಗದಲ್ಲಿ ಕುಷ್ಠರೋಗ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.