

ಬೆಂಗಳೂರು: ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ದೇಶಿಸಿದ್ದ ಕೋರ್ಟ್ ಆದೇಶ ಪಾಲಿಸದೆ ಮೇಯರ್, ಉಪ ಮೇಯರ್ ಜತೆ ಸಭೆ ನಡೆಸಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ ಆಯುಕ್ತರು ಹೈಕೋರ್ಟ್ಗೆ ಬೇಷರತ್ ಕ್ಷಮೆಯಾಚಿಸಿ ಪ್ರಮಾಣಪತ್ರ ಸಲ್ಲಿಸಿದರು.
ನಗರದ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ 2015ರಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿಯನ್ನು ಜ.31ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು 2019ರ ಸೆಪ್ಟೆಂಬರ್ನಲ್ಲಿ ನೀಡಿದ್ದ ಆದೇಶ ಪಾಲಿಸುವ ವಿಚಾರವನ್ನು ಕೌನ್ಸಿಲ್ ಸಭೆ ಮುಂದಿಡಲು ಸಭೆ ನಡೆಸಿದ್ದ ಆಯುಕ್ತರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಪ್ರಮಾಣಪತ್ರ ಸಲ್ಲಿಸಿದ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ಕುಮಾರ್, ಅರ್ಜಿ ಕುರಿತು 2019ರ ನ.27ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ‘ಕೋರ್ಟ್ ಆದೇಶವನ್ನು’ ಮೇಯರ್ ಹಾಗೂ ಉಪ ಮೇಯರ್, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ಮುಂದಿಡಲಾಗಿತ್ತು ಹಾಗೂ ‘ಸಭೆ ನಡೆಸಲಾಗಿತ್ತು’ ಎಂಬ ಶಬ್ದಗಳನ್ನು ಪ್ರಮಾದದಿಂದ ಉಲ್ಲೇಖಿಸಲಾಗಿದೆ ಎಂದು ತಪು್ಪ ಒಪ್ಪಿಕೊಂಡರು. ಕೋರ್ಟ್ ಆದೇಶ ರ್ಚಚಿಸುವ ಸಲುವಾಗಿ ಸಭೆ ಕರೆದಿರಲಿಲ್ಲ. ಬದಲಿಗೆ, ಪರಿಹಾರ ನೀಡುವ ಸಂಬಂಧ ನಿಯಮ ರೂಪಿಸುವ ಸಲುವಾಗಿ ಮೇಲ್ಕಂಡ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಇದು ಉದ್ದೇಶಪೂರ್ವಕವಲ್ಲದ ತಪ್ಪಾಗಿದೆ ಎಂದು ಪ್ರಮಾಣಪತ್ರದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಆದೇಶದಂತೆ, ಸಭೆಯಲ್ಲಿ ಪಾಲ್ಗೊಂಡಿದ್ದ ಮೇಯರ್, ಉಪಮೇಯರ್ ಸೇರಿ ಏಳು ಜನರ ಹೆಸರು ಹಾಗೂ ವಾರ್ಡ್ಗಳ ವಿವರಗಳನ್ನು ಪ್ರಮಾಣಪತ್ರದಲ್ಲಿ ನೀಡಿರುವ ಆಯುಕ್ತರು, ನ್ಯಾಯಾಲಯದ ಆದೇಶ ಪಾಲನೆ ಮಾಡುವಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದು, ಈ ವಿಚಾರದಲ್ಲಿ ಆಗಿರುವ ತಪ್ಪಿಗೆ ಬೇಷರತ್ ಕ್ಷಮೆಯಾಚಿಸುವುದಾಗಿ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
‘ಸಹಾಯ’ ಎಂಬ ಆಪ್ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ರಸ್ತೆಯ ಸ್ಥಿತಿಗತಿ ಬಗ್ಗೆ ಫೋಟೋ, ವಿಡಿಯೋ, ವಾಯ್್ಸ ಹಾಗೂ ಟೆಕ್ಸ್ಟ್ ಮೆಸೇಜ್ ಮೂಲಕ ದೂರು ನೀಡಬಹುದು. ಫೋಟೋ ಸಹಿತ ದೂರು ಸಲ್ಲಿಸಲು ವಾಟ್ಸ್ಆಪ್ ನಂಬರ್ ‘9480685700’ ಸಹ ನೀಡಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ಗುಂಡಿ ಮುಚ್ಚುವಿಕೆ ಪ್ರಗತಿಯಲ್ಲಿ
ಆಯಾ ವಾರ್ಡ್ ವ್ಯಾಪ್ತಿಯ ರಸ್ತೆಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ಮಾಸಿಕ ವರದಿ ಸಲ್ಲಿಸುವಂತೆ ವಾರ್ಡ್ ಸಮಿತಿಗಳಿಗೆ ನಿರ್ದೇಶನ ನೀಡಲಾಗಿದೆ. ನಗರದಲ್ಲಿನ 108 ರಸೆ್ತಗಳಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಮುಂದಿನ ವಿಚಾರಣೆ ವೇಳೆ ನೀಡಲಾಗುವುದು ಎಂದು ಪ್ರಮಾಣಪತ್ರದಲ್ಲಿ ಪಾಲಿಕೆ ಹೇಳಿದೆ. ಕಳಪೆ ರಸ್ತೆ ನಿರ್ವಣಕ್ಕೆ ಕಾರಣರಾಗುವ ಗುತ್ತಿಗೆದಾರರ ಮೇಲೆ ಹೊಣೆಗಾರಿಕೆ ನಿಗದಿಪಡಿಸುವ ಸಂಬಂಧ ಈಗಾಗಲೇ ಮುಖ್ಯ ಇಂಜಿನಿಯರ್ಗೆ ನಿರ್ದೇಶನ ನೀಡಲಾಗಿದೆ. ಅವರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಮಾಡುವ ಕಾಮಗಾರಿಗಳನ್ನು ಐಐಎಸ್ಸಿ ಅಥವಾ ಐಐಟಿಯಿಂದ ಪರಿಶೀಲನೆ ನಡೆಸಲಾಗುವುದು ಎಂದು ವಿವರಿಸಲಾಗಿದೆ. ಪಾಲಿಕೆಯ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಈ ಕುರಿತು ಫೆ.6ಕ್ಕೆ ಆದೇಶ ಪ್ರಕಟಿಸಲಾಗುವುದು ಎಂದಿತು.
ನೋಡಲ್ ಅಧಿಕಾರಿ ನೇಮಕ
ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ವ್ಯಾಜ್ಯ ಪರಿಹಾರ ವ್ಯವಸ್ಥೆ ರೂಪಿಸಲಾಗಿದ್ದು, ಬಿಬಿಎಂಪಿ (ಆಡಳಿತ) ವಿಶೇಷ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ರಸ್ತೆಗಳ ದುಸ್ಥಿತಿ ಬಗ್ಗೆ ದೂರು ಸ್ವೀಕರಿಸಿ, ಅವುಗಳ ಮೇಲೆ ಕ್ರಮ ಜರುಗಿಸುವುದು ಅವರ ಹೊಣೆಗಾರಿಕೆಯಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ನೋಡಲ್ ಅಧಿಕಾರಿಗಳು ಹದಗೆಟ್ಟ ರಸ್ತೆಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಸಾವು-ನೋವು ಸಂಭವಿಸಿದಾಗ, ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಬಿಬಿಎಂಪಿ ತಿಳಿಸಿದೆ.