

ಬೆಂಗಳೂರು: ನಗರದ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಬನಶಂಕರಿ ದೇವಸ್ಥಾನದ ಬಳಿ ಸ್ವಚ್ಛತೆ ಕೈಗೊಳ್ಳುವ ಜತೆಗೆ ಅಲ್ಲಿನ ಪಾದಚಾರಿ ಮಾರ್ಗಗಳ ಮೇಲಿ ಒತ್ತುವರಿಯನ್ನು ತೆರವು ಮಾಡುವಂತೆ ದಕ್ಷಿಣ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಸಾರಕ್ಕಿ ಮಾರುಕಟ್ಟೆ ಹಾಗೂ ಬನಶಂಕರಿ ದೇಗುಲ ಅಕ್ಕಪಕ್ಕದ ಪ್ರದೇಶಗಳಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಎರಡೂ ಕಡೆಗಳಲ್ಲಿ ಅಶುಚಿತ್ವ ಹೆಚ್ಚಾಗಿರುವುದನ್ನು ಕಂಡು ಅಧಿಕಾರಿಗಳು ಹಾಗೂ ಇಂಜಿನಿಯರ್‌ರಗಳನ್ನು ತರಾಟೆಗೆ ತೆಗೆದುಕೊಂಡರು. ಸಂಬಂಧಿಸಿದ ವಿಭಾಗದಿಂದ ತಕ್ಷಣವೇ ಸ್ವಚ್ಛತೆ ಕೈಗೊಳ್ಳಬೇಕು. ಜತೆಗೆ ಫುಟ್‌ಪಾತ್ ಮೇಲಿನ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು.
ಪಾಲಿಕೆಯ ವತಿಯಿಂದ ನೀಡಿರುವ ಗುರುತಿನ ಚೀಟಿ ಹೊಂದಿಲ್ಲದ ಬೀದಿ ಬದಿ ವ್ಯಾಪಾರಿಗಳನ್ನು ಆ ಪ್ರದೇಶದಿಂದ ತೆರವುಗೊಳಿಸಲಾಗುವುದು ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಈ ವೇಳೆ ಜಯನಗರ ವಲಯದ ಜಂಟಿ ಆಯುಕ್ತ ಮಧು, ಮುಖ್ಯ ಅಭಿಯಂತಾರ ಕೆ.ವಿ. ರವಿ ಉಪಸ್ಥಿತರಿದ್ದರು.
ರಸ್ತೆ ಗುಂಡಿಗಳ ಪರಿಶೀಲನೆ
ಜೆ.ಪಿ. ನಗರದ 2ನೇ ಹಂತದ ರಸ್ತೆಗಳಲ್ಲಿ ರಸ್ತೆಗುಂಡಿ ಮುಚ್ಚುವ ಕಾಮಗಾರಿಯ ತಪಾಸಣೆ ನಡೆಸಿದ ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ನವೀನ್ ಕುಮಾರ್ ರಾಜು, ತುರ್ತಾಗಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಬೇಕು. ಗುಂಡಿ ಮುಚ್ಚುವ ಸ್ಥಳಗಳ ಪಟ್ಟಿಯನ್ನು ಮೊದಲೇ ಸಿದ್ಧಮಾಡಿಟ್ಟುಕೊಂಡು ಸ್ಥಳೀಯ ಇಂಜಿನಿಯರ್‌ಗಲೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವಂತೆ ನಿರ್ದೇಶಿಸಿದರು. ಈ ವೇಳೆ ಮುಖ್ಯ ಅಭಿಯಂತರ ಬಸವರಾಜ ಕಬಾಡೆ ಇದ್ದರು.