ಪೌರ ಕಾರ್ಮಿಕರ ಹಾಜರಾತಿ ಪರಿಶೀಲಿಸಿದ ಆಯುಕ್ತರು

Screenshot_2023-08-13-17-32-22-02.jpg
Published on

ಬೆಳಗಾವಿ: ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಶನಿವಾರ ನಸುಕಿನ ವೇಳೆ ನಗರದ ವಿವಿಧ ಕಡೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.
 ಶನಿವಾರ ಸರ್ಕಾರಿ ರಜೆಯಾಗಿದ್ದರೂ ನಗರವನ್ನು ಸುತ್ತು ಹೊಡೆದ ಅವರು, ನಗರದ ಸರ್ದಾರ ಮೈದಾನದ ಬಳಿಯ ಬೀಟ್ ಕಚೇರಿಯಲ್ಲಿ ಪೌರ ಕಾರ್ಮಿಕರ ಆನ್ಲೈನ್ ಹಾಗೂ ಆಫ್‌ಲೈನ್ ಬಯೋಮೆಟ್ರಿಕ್ ಹಾಜರಾತಿ ಪರಿಶೀಲಿಸಿದರು. ಪಾಲಿಕೆಯ ಗ್ಯಾರೇಜ್‌ಗೆ ಭೇಟಿ ನೀಡಿ, ವಾಹನಗಳ ಚಾಲಕರ ಹಾಜರಾತಿ ಪರಿಶೀಲಿಸಿದರು. ಬಳಿಕ ಕಿರ್ಲೋಸ್ಕರ್ ರಸ್ತೆಯಲ್ಲಿ ಚಿಂದಿ ಆಯುವವರ ಜತೆ ಮಾತನಾಡಿ ಕುಶಲೋಪಹರಿ ವಿಚಾರಿಸಿದರು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನದಂತೆ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ 475 ಚಿಂದಿ ಆಯುವವರಿಗೆ ಪಾಲಿಕೆ ವತಿಯಿಂದ ಗುರುತಿನ ಚಿಟಿ ನೀಡಲಾಗಿದೆ. ಈ ಕುರಿತು ಚಿಂದಿ ಆಯುವವರ ಜತೆ ಚರ್ಚೆ ನಡೆಸಿದರು. ಬಳಿಕ ಖಾಸಬಾಗ ಲೆಗಸಿ ವೆಸ್ಟ್ ಲ್ಯಾಂಡ್, ಇ-ವೇಸ್ಟ್ ಸೆಂಟರ್‌ಗೆ ಭೇಟಿ ನೀಡಿದರು. ಅಲ್ಲಿರುವ ನಗರ ವಸತಿ ರಹಿತರ ಆಶ್ರಯ ಕೇಂದ್ರದ ವ್ಯವಸ್ಥೆ ಪರಿಶೀಲಿಸಿ, ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.
 ಕಿರಿಯ ಆರೋಗ್ಯ ನಿರೀಕ್ಷಕಿ ಶಿಲ್ಪಾ ಕುಂಬಾರ ಅವರು ತಮ್ಮ ವ್ಯಾಪ್ತಿಯ 6 ವಾರ್ಡ್‌ಗಳಲ್ಲಿ ಮಧ್ಯಪ್ರದೇಶದ ಇಂಧೋರ್ ಮಾದರಿಯಲ್ಲಿ ಕಸ ವಿಂಗಡಣೆ ಮಾಡುತ್ತಿರುವುದನ್ನು ವೀಕ್ಷಿಸಿದ ಆಯುಕ್ತ ಅಶೋಕ ದುಡಗುಂಟಿ ಅವರು, ಇತರೆ ವಾರ್ಡ್‌ಗಳಲ್ಲಿ ಕೂಡ ಇದೇ ರೀತಿ ಕಸ ವಿಂಗಡಣೆ ಮಾಡಬೇಕು ಎಂದು ಇತರೆ ಆರೋಗ್ಯ ನಿರೀಕ್ಷಕರು ಮತ್ತು ಪರಿಸರ ಅಭಿಯಂತ ಅವರಿಗೆ ನಿರ್ದೇಶನ ನೀಡಿದರು.
 ಪೌರಕಾರ್ಮಿಕರ ವಸತಿಗೃಹಗಳಿಗೆ ಭೇಟಿ:
 ಪೌರಕಾರ್ಮಿಕರ ವಸತಿಗೃಹಕ್ಕೆ ಭೇಟಿ ನೀಡಿ, ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಇದೇ ವೇಳೆ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಆಯುಕ್ತರು, ಅವುಗಳನ್ನು ಕೂಡಲೇ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಂತರ ರವಿವಾರ ಪೇಟೆ ಯ ಬಾಜಿ ಮಾರ್ಕೆಟ್‌ಗೆ ಭೇಟಿ ನೀಡಿ ಅಲ್ಲಿ ಸ್ವಚ್ಛತಾ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು.
 ಪರಿಸರ ಅಭಿಯಂತ ಹನುಮಂತ ಕಲಾದಗಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net