

ಬೆಂಗಳೂರು: ಹೊಸಕೋಟೆ-ಶಿಡ್ಲಘಟ್ಟ ಹಾಗೂ ಹೊಸಕೋಟೆ-ಚಿಂತಾಮಣಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೈಗಾರಿಕೆಗಳ ಗೋದಾಮು, ವಸತಿ ಬಡಾವಣೆಗಳಲ್ಲಿ ಮೀಸಲಿಟ್ಟಿರುವ ನಾಗರಿಕ ಸೌಲಭ್ಯ ನಿವೇಶನಗಳ (ಸಿ.ಎ) ಸ್ಥಿತಿಗತಿ ತಿಳಿಯಲು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಆಯುಕ್ತರು ಮಂಗಳವಾರ ದಿಢೀರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಹೊಸಕೋಟೆ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಿ.ಎ ನಿವೇಶನ ಹಾಗೂ ಹೆದ್ದಾರಿಗುಂಟ ಅನಧಿಕೃತ ಕಟ್ಟಡಗಳು ತಲೆಯೆತ್ತುತ್ತಿದ್ದು, ಭವಿಷ್ಯದ ಬೆಳವಣಿಗೆ ಅಡ್ಡಿಯಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆಯುಕ್ತ ರಾಜೇಂದ್ರ ಚೋಳನ್ ಅವರು ಸ್ಥಳೀಯ ಅಧಿಕಾರಿಗಳ ಜತೆಗೂಡಿ ತಪಾಸಣೆ ನಡೆಸಿ ಅನಧಿಕೃತ ನಿರ್ಮಾಣ ಚಟುವಟಿಕೆಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಪಾಸಣೆ ವೇಳೆ 30ಕ್ಕೂ ಹೆಚ್ಚು ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೆಲವು ಕಟ್ಟಡಗಳು ನಕ್ಷೆ ಅನುಮೋದನೆಯ ಪಡೆಯದೆ ನಿರ್ಮಾಣಗೊಂಡಿರುವುದು ದೃಢಪಟ್ಟಿದೆ. ಸೂಕ್ತ ದಾಖಲೆ ಒದಗಿಸಲು ವಿಲವಾದ ವೇರ್‌ಹೌಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಅಂತಹ ಬಿಲ್ಡಿಂಗ್‌ಗಳನ್ನು ಅನಧಿಕೃತ ಕಟ್ಟಡವೆಂದು ಪರಿಗಣಿಸಿ ತೆರವಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ಆಯುಕ್ತು ನೀಡಿದರು.
ಈ ವೇಳೆ ಬಿಎಂಆರ್‌ಡಿಎ ಕಾರ್ಯಪಡೆಯ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಡಿವೈಎಸ್ಪಿ ರವಿಕುಮಾರ್, ಮಹಾನಗರ ಯೋಜಕಿ ಜೆ.ಸುಮಾ, ಹೊಸಕೋಟೆ ಯೋಜನಾ ಪ್ರಾಧಿಕಾರದ ಜಂಟಿ ನಿರ್ದೇಶಕಿ ನಾಗರತ್ನ ಉಪಸ್ಥಿತರಿದ್ದರು.