

ಶಿವಮೊಗ್ಗ: ವೈಯಕ್ತಿಕ ಅಪಘಾತದ ಕ್ಲೇಮ್ ಮತ್ತು ಓಡಿ ಕ್ಲೇಮ್ ಮೊತ್ತ ನೀಡುವಲ್ಲಿ ಸೇವಾನ್ಯೂನ್ಯತೆ ಎಸಗಿದ ಕಾರಣಕ್ಕೆ 15 ಲಕ್ಷ ರೂ. ಅನ್ನು ಶೇ.9ರ ಬಡ್ಡಿ ಸಹಿತ ದೂರುದಾರರಿಗೆ ಪಾವತಿಸುವಂತೆ ವಿಮಾ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಹದಿಕೆರೆಯ ಚಿದಾನಂದ್ ಎಂಬುವರು ಚೆನ್ನೈ ತಂಬುಚೆಟ್ಟಿ ಸ್ಟ್ರೀಟ್‌ನ ಚೋಳ ಎಂ.ಎಸ್.ಜನರಲ್ ಇನ್ಶೂರೆನ್ಸ್ ಕಂಪನಿ ಮತ್ತು ಶಿವಮೊಗ್ಗ ಶೇಷಾದ್ರಿಪುರಂನ ಎಕ್ಸ್‌ಟೆನ್ಷನ್ ಸೇವಾನ್ಯೂನ್ಯತೆ ಕುರಿತು ವಕೀಲರ ಮೂಲಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಚಿದಾನಂದ ಅವರ ಪುತ್ರ 202ರಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದು ವಿಮಾ ಕಂಪನಿಗೆ ಓ.ಡಿ.ಕ್ಲೇಮ್ ಮತ್ತು ವೈಯಕ್ತಿಕ ಅಪಘಾತದ ಕ್ಲೇಮ್ ಮೊತ್ತ ಪಾವತಿಸುವಂತೆ ಮನವಿ ಮಾಡಿದ್ದರು. ಆದರೆ ಅಪಘಾತದ ವಿಷಯ ತಿಳಿಸಲು 424 ದಿನಗಳ ವಿಳಂಬವಾಗಿದೆ ಎಂಬ ನೆಪವೊಡ್ಡಿ ಸಂಸ್ಥೆಯು ವಿಮಾ ಮೊತ್ತ ನೀಡಲು ನಿರಾಕರಿಸಿತ್ತು. ಈ ಬಗ್ಗೆ ಆಯೋಗಕ್ಕೆ ಚಿದಾನಂದ ದೂರು ಸಲ್ಲಿಸಿದ್ದರು.
ದೂರುದಾರರು ಮತ್ತು ಎದುರುದಾರರ ವಾದ ಆಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಸುಪ್ರೀಂಕೋರ್ಟ್ ಆದೇಶವನ್ನು ಪರಿಗಣನೆಗೆ ತೆಗೆದುಕೊಂಡು ವಿಮಾ ಸಂಸ್ಥೆ ಸೇವಾನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿದ ದೂರನ್ನು ಭಾಗಶಃ ಪುರಸ್ಕರಿಸಿತು. ಅಲ್ಲದೆ, ವೈಯಕ್ತಿಕ ಅಪಘಾತ ಕ್ಲೇಮ್ ಅನ್ನು 2024ರ ಮೇ 31ರಿಂದ ಅನ್ವಯವಾಗುವಂತೆ ಬಡ್ಡಿ ಸಹಿತ ಆದೇಶವಾದ 45 ದಿನದೊಳಗೆ ಪಾವತಿಸುವಂತೆ ಸೂಚಿಸಿದೆ. ಇಲ್ಲವಾದಲ್ಲಿ ವಿಮಾ ಮೊತ್ತಕ್ಕೆ ಶೇ.12ರಂತೆ ಬಡ್ಡಿ ಸಹಿತ ಪಾವತಿಸಬೇಕು. ಅಲ್ಲದೆ, ಮಾನಸಿಕ ಹಿಂಸೆಗಾಗಿ 25 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚಾಗಿ 10 ಸಾವಿರ ರೂ. ನೀಡಬೇಕೆಂದ ಆದೇಶಿಸಿದೆ.