45 ದಿನದೊಳಗೆ ವಿಮಾ ಹಣ ಪಾವತಿಸಲು ಆಯೋಗ ಆದೇಶ

Consumar court
ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಾರ್ಯಾಲಯ.
Published on

ಶಿವಮೊಗ್ಗ: ವೈದ್ಯಕೀಯ ವೆಚ್ಚ ಭರಿಸುವಲ್ಲಿ ಸೇವಾನ್ಯೂನ್ಯತೆ ಎಸಗಿದ್ದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ 45 ದಿನದೊಳಗೆ ವಿಮಾ ಹಣವನ್ನು ಅರ್ಜಿದಾರರಿಗೆ ಪಾವತಿಸುವಂತೆ ಆದೇಶಿಸಿದೆ.

ಶಿವಮೊಗ್ಗದ ಉಷಾಬಾಯಿ ಅವರು ಮುಂಬೈನ ಆದಿತ್ಯ ಬಿಲಾ ಹೆಲ್ಸ್ ಇನ್ಸೂರೆನ್ಸ್ ಕಂಪನಿ ವಿತರಿಸಿದ ಒಂದು ಲಕ್ಷ ರೂ. ಕವರೇಜ್ ಹೊಂದಿದ್ದ ಗ್ರೂಪ್ ಆಕ್ಟೀವ್ ಹೆಲ್ತ್ ಮಾಸ್ಟರ್ ಪಾಲಿಸಿಯನ್ನು ಶಿವಮೊಗ್ಗದ ಫೈನಾನ್ಸ್ ಲಿಮಿಟೆಡ್ ಮೂಲಕ ಪಡೆದಿದ್ದರು. 2023ರ ಏಪ್ರಿಲ್‌ನಲ್ಲಿ ಶಿವಮೊಗ್ಗದ ಚಂದ್ರಗಿರಿ ಆಸ್ಪತ್ರೆಯಲ್ಲಿ ಹರಿಯೋಪ್ಲಾಸ್ಟಿ ಸರ್ಜರಿ ಮಾಡಿಸಿಕೊಂಡು ಎಲ್ಲ ದಾಖಲೆಗಳನ್ನು ನೀಡಿ 75,469 ರೂ. ಗಳ ವೈದ್ಯಕೀಯ ವೆಚ್ಚದ ಬಿಲ್ ಅನ್ನು ಮರುಪಾವತಿಗಾಗಿ ಕಂಪನಿಗೆ ನೀಡಿದ್ದರು. ಆದರೆ ಹಳೇ ಕಾಯಿಲೆ ಮುಚ್ಚಿಟ್ಟು ವಿಮಾ ಪಾಲಿಸಿ ಪಡೆದಿದ್ದಾರೆಂದು ಮರುಪಾವತಿಗೆ ಕಂಪನಿ ನಿರಾಕರಿಸಿತ್ತು.

ಈ ಬಗ್ಗೆ ಉಷಾಬಾಯಿ ಅವರು ಆಯೋಗದ ಮೊರೆ ಹೋಗಿದ್ದರು. ಪ್ರಕರಣ ನೋಂದಣಿ ಮಾಡಿಕೊಂಡಿದ್ದ ಆಯೋಗವು ವಿಮಾ ಕಂಪನಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿ ದೂರಿನ ಬಗ್ಗೆ ತಕರಾರು ಇದ್ದಲ್ಲಿ ಖುದ್ದು ಅಥವಾ ವಕೀಲರ ಮೂಲಕ ಸಲ್ಲಿಸುವಂತೆ ಸೂಚಿಸಿತ್ತು. ವಿಮಾ ಕಂಪನಿಯು ದೂರುದಾರರು 10 ವರ್ಷಗಳಿಂದ ಇದ್ದ ಕಾಯಿಲೆ ಮುಚ್ಚಿಟ್ಟು ಪಾಲಿಸಿ ಮಾಡಿದ್ದಾರೆಂದು ಕ್ಲೇಮ್ ಅನ್ನು ತಿರಸ್ಕರಿಸಿ ಸೇವಾ ನ್ಯೂನತೆ ಆಗಿಲ್ಲವೆಂಬ ಕಾರಣ ನೀಡಿ ದೂರನ್ನು ವಜಾ ಮಾಡಲು ಕೋರಿತ್ತು.

ಆದರೆ ಆಯೋಗವು ಪ್ರಮಾಣಪತ್ರ ಮತ್ತು ದಾಖಲೆ ಪರಿಶೀಲಿಸಿ ಮತ್ತು ವಕೀಲರ ವಾದಗಳನ್ನು ಆಲಿಸಿ ಕಂಪನಿಯು ಅಪಾದಿಸಿರುವ ಕಾರಣಕ್ಕೆ ಯಾವುದೇ ಪೂರಕವಾದ ದಾಖಲೆಗಳನ್ನು ಹಾಜರುಪಡಿಸಿಲ್ಲವೆಂದು ಕ್ಲೇಮ್ ತಿರಸ್ಕರಿಸುವುದು ಯಾವುದೇ ಕಾನೂನಿನಡಿಯಲ್ಲಿ ಬರುವುದಿಲ್ಲವೆಂದು ತೀರ್ಮಾನಿಸಿ ಅರ್ಜಿದಾರರ ದೂರನ್ನು ಭಾಗಶಃ ಪುರಸ್ಕರಿಸಿ ವಿಮಾ ಕಂಪನಿಯೇ ಸೇವಾನ್ಯೂನ್ಯತೆ ಎಸಗಿದೆ ಎಂದು ತೀರ್ಮಾನಿಸಿದೆ.

ಆದ್ದರಿಂದ ಅರ್ಜಿದಾರರಿಗೆ ವೈದ್ಯಕೀಯ ವೆಚ್ಚದ ಮೊತ್ತ 73,370 ರೂ. ಅನ್ನು ವಿಮಾ ಕಂಪನಿಯು ಅರ್ಜಿಯನ್ನು ತಿರಸ್ಕರಿಸಿದ ದಿನದಿಂದ ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಆದೇಶವಾದ 45 ದಿನಗಳೊಳಗೆ ಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಅವರ ಪೀಠ ಆದೇಶಿಸಿದೆ.

ತಪ್ಪಿದ್ದಲ್ಲಿ ಈ ಆದೇಶದ ದಿನಾಂಕದಿಂದ 73,370 ರೂ. ಗಳಿಗೆ ವಾರ್ಷಿಕ ಶೇ 10ರ ಬಡ್ಡಿಯನ್ನು ಪೂರಾ ಹಣ ನೀಡುವವರೆಗೂ ಪಾವತಿಸಲು ಹಾಗೂ ಎದುರುದಾರರ ಸೇವಾನ್ಯೂನ್ಯತೆಯಿಂದ ಅರ್ಜಿದಾರರಿಗೆ ಉಂಟಾದ ಮಾನಸಿಕ ವ್ಯಥೆಗೆ 20 ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು 10 ಸಾವಿರ ರೂ. ನೀಡುವಂತೆ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net