

ಶಿವಮೊಗ್ಗ: ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಶೇ.9ರಂತೆ ಬಡ್ಡಿ ಸೇರಿಸಿ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪನಿಗೆ ಆದೇಶಿಸಿದೆ. ಆದೇಶವಾದ 45 ದಿನದೊಳಗೆ ಪೂರ್ತಿ ಹಣ ನೀಡಬೇಕು. ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.12ರಂತೆ ಬಡ್ಡಿ ಸೇರಿಸಿ ಪೂರ್ತಿ ಹಣ ನೀಡಬೇಕೆಂದು ತೀರ್ಪು ನೀಡಿದೆ.
ಹೊಸನಗರ ತಾಲೂಕಿನ ಹುಂಚ ಪಂಚಾಯತ್ ವ್ಯಾಪ್ತಿಯಲ್ಲಿ ಯಶೋಧಮ್ಮ ಅವರ ಪತಿ ನೀರಗಂಟಿ ಮತ್ತು ಬೀದಿದೀಪಗಳ ಬದಲಿಸುವ ಕೆಲಸ ಮಾಡುತ್ತಿದ್ದರು. ಕರ್ನಾಟಕ ಬ್ಯಾಂಕ್‌ನ ಹುಂಚ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು ಗ್ರೂಪ್ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿ ಮಾಡಿಸಿದ್ದರು. ಈ ನಡುವೆ ಬೀದಿ ದೀಪ ಬದಲಿಸುವಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದರು. ವಿಮಾ ಪರಿಹಾರ ನೀಡುವಂತೆ ಯಶೋಧಮ್ಮ ಕಂಪನಿಗೆ ಮನವಿ ಮಾಡಿದ್ದರು.
ಆದರೆ ತಮ್ಮ ಪತಿ ಸುರಕ್ಷಿತ ಕ್ರಮ ಅನುಸರಿಸಿಲ್ಲ ಮತ್ತು ಬೀದಿ ದೀಪ ಬದಲಿಸುವಾಗ ಕಬ್ಬಿಣದ ಏಣಿ ಉಪಯೋಗಿಸಿದ ಕಾರಣ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆಂದು ಕಂಪನಿ ಯಶೋಧಮ್ಮ ಅವರ ಮನವಿಯನ್ನು ತಿರಸ್ಕರಿಸಿ ಪರಿಹಾರ ನೀಡಲು ವಿಮಾ ಕಂಪನಿ ನಿರಾಕರಿಸಿತ್ತು. ಹಾಗಾಗಿ ಯಶೋಧಮ್ಮ ಮಹಾರಾಷ್ಟ್ರ ಮುಂಬೈನ ಆಥರೈಸ್ಡ್ ಸಿಗ್ನೇಟರಿ, ಯೂನಿವರ್ಸಲ್ ಸೋಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿ ವಿರುದ್ಧ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾನ್ಯೂನತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಈ ಬಗ್ಗೆ ದಾಖಲಾತಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಎದುರುದಾರರು ಕ್ಲೇಮ್ ಅನ್ನು ತಿರಸ್ಕರಿಸಿರುವುದು ಸೇವಾನ್ಯೂನತೆಯಾಗಿದೆ ಎಂದು ಪರಿಗಣಿಸಿದೆ. ಯಶೋಧಮ್ಮ ಅವರ ದೂರನ್ನು ಭಾಗಶಃ ಪುರಸ್ಕರಿಸಿ ಪರಿಹಾರ ನೀಡುವಂತೆ ಜತೆಗೆ ಮಾನಸಿಕ ಹಿಂಸೆಗಾಗಿ 30 ಸಾವಿರ ರೂ. ಮತ್ತು ವ್ಯಾಜ್ಯದ ಖರ್ಚಾಗಿ 10 ಸಾವಿರ ರೂ. ನೀಡಬೇಕೆಂದು ಆದೇಶಿಸಿದೆ.