

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಂತ್ರೋಪಕರಣವನ್ನು ವಿಳಂಬವಾಗಿ ನೀಡಿದ್ದರಿಂದ ಬೆಳಗಾವಿಯ ಕಂಪನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಸೋಮವಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಶೆಟ್ಟರ್ ಕಾಲನಿಯ ಅಶೋಕ ಶದ್ಮಾಕರ್ ಎಂಬುವವರು ಬೆಳಗಾವಿಯ ನಿಖಿತಾ ಅವರಿಂದ 2022ರ ಅಕ್ಟೋಬರ್‌ನಲ್ಲಿ 14,00,015 ರೂ. ನೀಡಿ ಹೈಡ್ರೋಪವರ್ ಉಪಕರಣ (ಯಂತ್ರ) ಖರೀದಿಸಿದ್ದರು. ಆದರೆ ಕಂಪನಿಯು 4 ತಿಂಗಳು ತಡವಾಗಿ ಯಂತ್ರ ನೀಡಿದೆ. ಯಂತ್ರ ಖರೀದಿಗೆ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರಿಂದ ಕಂತು ಕಟ್ಟುವ ಹೊಣೆಗಾರಿಕೆ ಬಂದಿತ್ತು. ಇದಲ್ಲದೆ ಯಂತ್ರದಲ್ಲಿ ಕೆಲ ನ್ಯೂನ್ಯತೆಗಳು ಕಂಡು ಬಂದು ಆಯಿಲ್ ಸೋರುವಿಕೆಯಿಂದ ಉದ್ಯಮದಲ್ಲಿ ನಷ್ಟವಾಗಿದೆ ಎಂದು 2023ರ ಜು. 11ರಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ದಾಖಲೆಗಳನ್ನು ಪರಿಶೀಲಿಸಿದಾಗ ದೋಷಯುಕ್ತ ಹೈಡ್ರೋಪವರ್ ಯಂತ್ರ ನೀಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ. ದೂರುದಾರರಿಗೆ ಆಗಿರುವ ತೊಂದರೆ ಮತ್ತು ವ್ಯವಹಾರಿಕ ನಷ್ಟ ಪರಿಗಣಿಸಿ ದೂರುದಾರರು ಹೇಳಿದಾಗ ಯಂತ್ರ ದುರಸ್ತಿ ಮಾಡಿಸಬೇಕಲ್ಲದೆ, ನಷ್ಟಕ್ಕೆ 50,000 ರೂ. ಪರಿಹಾರ ನೀಡಬೇಕು. ಅಲ್ಲದೆ, ದೂರುದಾರರಿಗೆ ಆಗಿರುವ ಅನನುಕೂಲ ಹಾಗೂ ಮಾನಸಿಕ ತೊಂದರೆಗೆ 50,000 ರೂ. ಹಾಗೂ ಪ್ರಕರಣದ ಖರ್ಚು ವೆಚ್ಚ ಎಂದು 10 ಸಾವಿರ ರೂ. ಪರಿಹಾರವನ್ನು ಒಂದು ತಿಂಗಳಲ್ಲಿ ನೀಡುವಂತೆ ಆಯೋಗ ತೀರ್ಪು ನೀಡಿದೆ.