

ಬೆಂಗಳೂರು: ಬಿಬಿಎಂಪಿಯಲ್ಲಿ ಮತ್ತೆ ಅಧಿಕಾರಿಗಳು ಕಮಿಷನ್ ಪಡೆದಿರುವ ಆರೋಪ ಸದ್ದು ಮಾಡುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸೂಚಿಸಿದ್ದಾರೆ.
ಕಳೆದ ವರ್ಷ ಮಳೆಗಾಲದಲ್ಲಿ ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ರೆಂಬೆ-ಕೊಂಬೆ ಸಹಿತ ಧರಾಶಾಯಿ ಆಗಿದ್ದ ಮರಗಳ ಅವಶೇಷವನ್ನು ಸಾಗಣೆ ಮಾಡಿದ್ದಕ್ಕೆ ಬಿಲ್ ಪಾವತಿ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಮಿಷನ್ ಹಣ ಕೇಳಿದ್ದಾರೆಂದು ಗುತ್ತಿಗೆದಾರ ಶ್ರೀನಿವಾಸ್ ಎಂಬುವವರು ಡಿಸಿಎಂಗೆ ಲಿಖಿತ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆಯೇ ನೀಡಲಾದ ದೂರು ಆಧರಿಸಿ, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೇ, ಬೇಡವೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಂದ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗಿದೆ.
ಡಿಸಿಎಫ್ ಅವರು 18 ಲಕ್ಷ ರೂ. ಮೊತ್ತದ ಬಿಲ್ ಪಾಸ್ ಮಾಡಲು ಶೇ.15 ಕಮಿಷನ್ ಕೇಳಿದ್ದಾರೆ. ಈ ಹಣ ಕೊಡದ ಹೊರತು ಬಿಲ್ ಪಾವತಿ ಆಗದು ಎಂಬ ಆರೋಪ ದೂರಿನಲ್ಲಿ ನಮೂದಿಸಲಾಗಿದೆ. ಜತೆಗೆ ಇಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಿದ್ದು, ಗುತ್ತಿಗೆದಾರರ ನೆರವಿಗೆ ಧಾವಿಸುವಂತೆ ದೂರುದಾರರು ಡಿಸಿಎಂಗೆ ಮನವಿ ಮಾಡಿದ್ದಾರೆ.
ಪ್ರಕರಣ ಕುರಿತು ಮುಖ್ಯ ಆಯುಕ್ತರು ಸಂಬಂಧಿಸಿದ ಡಿಸಿಎಫ್ ಅವರಿಂದ ಮೌಖಿಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ವೇಳೆ ದೂರುದಾರರೇ ನಕಲಿ ಬಿಲ್ ತಯಾರಿಸಿ ಅದನ್ನು ಪಾಸ್ ಮಾಡಿಕೊಡುವಂತೆ ಮನವಿ ಮಾಡಿದ್ದರು. ಈ ಕಾರಣದಿಂದಾಗಿ ಶ್ರೀನಿವಾಸ್ ತಮ್ಮ ವಿರುದ್ಧ ಡಿಸಿಎಂಗೆ ದೂರು ನೀಡಿದ್ದಾರೆಂಬ ಸಮಜಾಯಿಷಿಯನ್ನು ಡಿಸಿಎಫ್ ನೀಡಿದ್ದಾರೆಂದು ತಿಳಿದುಬಂದಿದೆ.