ವ್ಯಾಪಾರೀಕರಣವಾಗುತ್ತಿರುವ ಶಿಕ್ಷಣ, ಆರೋಗ್ಯ ಕ್ಷೇತ್ರ

13ark1..
ಅರಕಲಗೂಡು ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಸಕ್ಷಮ್ ಫೌಂಡೇಷನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಲಾಯಿತು. ಕೆ.ಪಿ. ನಾರಾಯಣ್, ಗುರುಪ್ರಸಾದ್ ಅತ್ನಿ, ಡಾ. ಅಶೋಕ್ ಇತರರಿದ್ದರು.
Published on

ಅರಕಲಗೂಡು: ಆಧುನಿಕ ಭರಾಟೆ ನಡುವೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವ್ಯಾಪಾರೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್ ಹೇಳಿದರು.

ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಸಕ್ಷಮ್ ಫೌಂಡೇಷನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆಗಳು ಉಳಿದು ಬೆಳೆದಾಗ ಜನರು, ಬಡವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆ ಸುಲಭವಾಗಿ ದೊರಕಲು ಸಾಧ್ಯವಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಶಾಲೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿರುವುದು ಹರ್ಷದಾಯಕ ಸಂಗತಿಯಾಗಿದ್ದು ಇದು ಎಲ್ಲ ಶಾಲೆಗಳಲ್ಲೂ ಸಾಕಾರಗೊಳ್ಳುವಂತಾಗಬೇಕು ಎಂದು ತಿಳಿಸಿದರು.

ಮಂಗಳೂರು ಜಿಲ್ಲಾ ಟೌನ್ ಪ್ಲಾೃನಿಂಗ್ ಸಹಾಯಕ ನಿರ್ದೇಶಕ ಗುರುಪ್ರಸಾದ್ ಅತ್ನಿ ಮಾತನಾಡಿ, ಗುರುಗಳು ಕೊಡುವ ಜ್ಞಾನವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಸೈನ್ಯದಿಂದ ನಿವೃತ್ತಿಯಾಗಿ ಓದಿದ ಶಾಲೆಯನ್ನು ನೋಡಲು ಬಂದಾಗ ಇಲ್ಲಿನ ದುಸ್ಥಿತಿ ಬೇಸರ ತರಿಸಿತು. 90ರ ದಶಕದಲ್ಲಿ ಶಾಲೆಯಲ್ಲಿ ಕಲಿತ ತಮ್ಮ ತಂಡದ ಸ್ನೇಹಿತರಲ್ಲಿ ಚರ್ಚಿಸಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಎಲ್ಲರ ಸಹಕಾರದಿಂದ ಶಾಲೆಗೆ ಅಗತ್ಯ ನೆರವು ಕಲ್ಪಿಸಿದ್ದೇವೆ. ಇದನ್ನು ಈ ಶಾಲೆಗೆ ಮಾತ್ರವಲ್ಲದೆ ಇತರ ಶಾಲೆಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.

ಮುಖ್ಯ ಶಿಕ್ಷಕ ಬೇಲೂರೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರವಿಕುಮಾರ್, ನಿವೃತ್ತ ಶಿಕ್ಷಕರಾದ ಸುಶೀಲಮ್ಮ, ದೇವರಾಜ್ ಮಾತನಾಡಿದರು. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಹಾಗೂ ಬೇರೆಡೆ ಕಾರ್ಯ ನಿರ್ವಹಿಸುತ್ತಿರುವ 36 ಶಿಕ್ಷಕರಿಗೆ ಗುರುವಂದನೆ ನೀಡಿ ಸನ್ಮಾನಿಸಲಾಯಿತು. ಉತ್ತಮ ಕಾರ್ಯ ನಿರ್ವಹಣೆಗಾಗಿ ಎಎಸ್ ಐ ದೇವರಾಜ್, ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ಚಾಲಕ ಶಂಭುಲಿಂಗೇಗೌಡ, ಪೌರ ಕಾರ್ಮಿಕ ರಂಗಸ್ವಾಮಿ, ಉತ್ತಮ ಪ್ರತಿಭೆಗಾಗಿ ಧವನಿ, ಅಕ್ಷತಾ ಅವರನ್ನು ಗೌರವಿಸಲಾಯಿತು.

ಹಾಸನ ಲೆಕ್ಕಪರಿಶೋಧನೆ ಇಲಾಖೆ ಉಪ ನಿರ್ದೇಶಕ ಡಾ. ಅಶೋಕ್, ಪಪಂ ಉಪಾಧ್ಯಕ್ಷ ಸುಬಾನ್ ಷರೀಫ್, ಸದಸ್ಯ ರಮೇಶ್ ವಾಟಾಳ್, ಕ್ಷೇತ್ರ ಸಮನ್ವಯಾಧಿಕಾರಿ ಬಾಲರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಕ್ಲಸ್ಟರ್ ಅಧಿಕಾರಿ ರೂಪಾ, ರಂಗನಾಥ್, ವೆಂಕಟೇಶ್ ಇತರರು ಇದ್ದರು. ವಿದ್ಯಾರ್ಥಿಗಳ ಪಾಳಕರಿಗೆ ನಡೆಸಿದ ಕ್ರೀಡಾ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಬಿಇಒ ಕಚೇರಿಯಂದ ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net