

ಕೆ.ಆರ್.ನಗರ : ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದರ ಜತೆಗೆ ಬಡವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಆದ್ಯತೆ ನೀಡುವುದಾಗಿ ನಮ್ಮ ಯುವ ಕಾಂಗ್ರೆಸ್ ಶ್ರಮಿಸಲಿದೆ ಎಂದು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿ ಮಂಜು ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಇತ್ತೀಚೆಗೆ ಖಾಸಗಿ ಶಾಲೆಯ ವ್ಯಾಮೋಹದಿಂದಾಗಿ ಶಿಕ್ಷಣ ವ್ಯಾಪರೀಕರಣವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಕ್ಷೀರಭಾಗ್ಯ, ಬಿಸಿಯೂಟ, ಮಕ್ಕಳ ಬೆಳವಣಿಗಾಗಿ ವಾರದ ಆರು ದಿನ ಮೊಟ್ಟೆ, ಬಾಳೆಹಣ್ಣು, ಸಿರಿಧಾನ್ಯಗಳ ಆಹಾರ ಪದಾರ್ಥಗಳು ಮತ್ತು ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ನೀಡುತ್ತಿದ್ದು ಶಿಕ್ಷಣ ಸರ್ವರಿಗೂ ದೊರೆಯಬೇಕು ಎಂಬ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.
ಈ ದೇಶದ ಪ್ರಗತಿಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದ್ದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮತ್ತು ಬಡವರ ಮಕ್ಕಳ ಶಿಕ್ಷಣಕ್ಕಾಗಿ ನಮ್ಮ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಸೂಚನೆಯಂತೆ ಅಗತ್ಯ ಕಲಿಕಾ ಸಾಮಾಗ್ರಿಗಳನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಇಡೀ ತಾಲೂಕಿನ ಸರ್ಕಾರಿ ಶಾಲೆಗಳಿಗು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪುರಸಭಾ ಮಾಜಿ ಅಧ್ಯಕ್ಷ ನರಸಿಹರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಸ್.ಮಹದೇವ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಸೈಯದ್ ಜಾಬೀರ್, ಪುರಸಭಾ ಸದಸ್ಯ ಎಸ್.ಶಂಕರ್, ಮಾಜಿ ಸದಸ್ಯ ವಿನಯ್, ಎಸ್‌ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹೇಮಂತ್, ಜಿಲ್ಲಾ ಕಾರ್ಯದರ್ಶಿ ಮೋಹನ್, ಯುವ ಮುಖಂಡರಾದ ಗೌತಮ್ ಜಾದವ್, ಗೋಪಿ, ಮೋಹನ, ತೇಜು, ದರ್ಶನ್, ಮುಖ್ಯಶಿಕ್ಷಕಿ ಬೀಬಿ, ಸಹಶಿಕ್ಷಕರಾದ ರಂಗಪ್ಪ, ನಾಗರತ್ನ, ತೇಜಸ್ವಿನಿ, ಕವಿತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಯೋಗಾನಂದ, ಕಾರ್ಯದರ್ಶಿ ಶಿಲ್ಪಾ ಶ್ರೀನಿವಾಸ್ ಹಾಜರಿದ್ದರು.