ಜಿಎಸ್‌ಟಿ ಆಸ್ತಿಗಳಿಗೆ ವಾಣಿಜ್ಯ ತೆರಿಗೆ

Commercial tax on GST properties
ಗುಳೇದಗುಡ್ಡದ ಪುರಸಭೆಯ ಸಾಮಾನ್ಯ ಸಭೆಯು ಜ್ಯೋತಿ ಗೋವಿನಕೊಪ್ಪ ಅವರ ಅಧಕ್ಷತೆಯಲ್ಲಿ ನಡೆಯಿತು. ಪುರಸಭೆ ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರಾದ ವಿಠ್ಠಲಸಾ ಕಾವಡೆ, ವಿನೋದ ಮದ್ದಾನಿ, ಸಂತೋಷ ನಾಯನೇಗಲಿ, ಯಲ್ಲಪ್ಪ ಮನ್ನಿಕಟ್ಟಿ, ಅಮರೇಶ ಕವಡಿಮಟ್ಟಿ, ಪ್ರಶಾಂತ ಜವಳಿ, ಶ್ಯಾಮ ಮೇಡಿ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಪಟ್ಟಣದಲ್ಲಿ ವಾಣಿಜ್ಯ ಇಲಾಖೆಯಿಂದ ಜಿಎಸ್‌ಟಿ ಹೊಂದಿರುವ 237 ವ್ಯವಹಾರ, ಉದ್ಯಮಿಗಳಿದ್ದು, ಅವರ ಜಿಎಸ್‌ಟಿ ಅನುಮತಿ ಹೊಂದಿರುವ ಆಸ್ತಿಗಳಿಗೆ ವಾಣಿಜ್ಯ ಆಸ್ತಿ ತೆರಿಗೆ ವಿಧಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅವರ ಅಧಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ, ಪುರಸಭೆಗೆ ಸ್ಥಾಯಿ ಸಮಿತಿ ರಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯ ರಫೀಕ್ ಕಲ್ಬುರ್ಗಿ ಅವರು 9 ಸದಸ್ಯರ ಪಟ್ಟಿಯನ್ನು ಅಧ್ಯಕ್ಷರಿಗೆ ಸೂಚಿಸಿದರು. ಆದರೆ, ನಮ್ಮನ್ನು ಕೇಳದೆ ಸಮಿತಿ ಪಟ್ಟಿಯನ್ನು ಹೇಗೆ ರಚನೆ ಮಾಡಿದಿರಿ? ನಮ್ಮ ಪಕ್ಷದವರೇ ಅಧ್ಯಕ್ಷರಿರುವಾಗ ನಮಗೆ ಗೊತ್ತಿಲ್ಲದಂತೆ ಸಮಿತಿ ರಚನೆ ಮಾಡುತ್ತಿರುವುದು ಸರಿಯಲ್ಲ. ಇದನ್ನು ಮತಕ್ಕೆ ಹಾಕುವಂತೆ ಸದಸ್ಯ ಉಮೇಶ ಹುನಗುಂದ ಒತ್ತಾಯಿಸಿದ ಕಾರಣ ಮಾತುಕತೆ ನಡೆಸಿ ಸರ್ವಾನುಮತದಿಂದ ಅದೇ 9 ಜನರ ಸದಸ್ಯರ ಸಮಿತಿ ರಚಿಸಲು ಒಪ್ಪಿಗೆ ಸೂಚಿಸಲಾಯಿತು.

ಪುರಸಭೆಯಲ್ಲಿ ಇ - ಸೊತ್ತು ಖಾತೆ, ಉತಾರ ನೀಡಲು ಹೆಚ್ಚಿಗೆ ಹಣ ಕೇಳುತ್ತಾರೆ, ಹೆಚ್ಚಿನ ಹಣ ಪಡೆದವರಿಗೆ ನೋಟಿಸ್ ನೀಡಿ, ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯರಾದ ಶಿಲ್ಪಾ ಹಳ್ಳಿ, ರಾಜೇಶ್ವರಿ ಉಂಕಿ ಒತ್ತಾಯಿಸಿದರು. ಈ ಬಗ್ಗೆ ವಿಚಾರಿಸಿ ಅವರ ಮೇಲೆ ನೋಟಿಸ್ ಜರುಗಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಪರಿಶಿಷ್ಟ ಜಾತಿ, ಪಂಗಡದ 15 ಜನರು ಶೌಚಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದರಲ್ಲಿ 6 ಜನರು ಶೌಚಾಲಯ ಕಟ್ಟಿಸಿದ್ದು, ಉಳಿದ 9 ಜನರ ಅನುದಾನ 2.10 ಲಕ್ಷ ರೂ. ಉಳಿದಿದೆ. ಈ ಹಣದಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಯಿತು.

ಭೂಪರಿವರ್ತನೆ ವಿಷಯಕ್ಕೆ ಸಂಬಂಧಿಸಿದಂತೆ, ಭೂಮಿ ಪರಿವರ್ತನೆ ಮಾಡಿಕೊಳ್ಳವವರ ಹೆಸರನ್ನೇ ಸಭೆಯಲ್ಲಿ ಇಟ್ಟಿಲ್ಲ. ಅವರ ಹೆಸರನ್ನು ಓದಿ ಹೇಳುವಂತೆ ಸಭೆಯಲ್ಲಿ ಆಗ್ರಹಿಸಿದರು. ನಂತರ ದಾಖಲೆಗಳು ಸರಿಯಾಗಿದ್ದರೆ ಭೂ ಪರಿವರ್ತನೆ ಮಾಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಪುರಸಭೆ ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರಾದ ವಿಠ್ಠಲಸಾ ಕಾವಡೆ, ವಿನೋದ ಮದ್ದಾನಿ, ಸಂತೋಷ ನಾಯನೇಗಲಿ, ಯಲ್ಲಪ್ಪ ಮನ್ನಿಕಟ್ಟಿ, ಅಮರೇಶ ಕವಡಿಮಟ್ಟಿ, ಪ್ರಶಾಂತ ಜವಳಿ, ಶ್ಯಾಮ ಮೇಡಿ, ಕಾಶೀನಾಥ ಕಲಾಲ, ಯಲ್ಲವ್ವ ಗೌಡರ, ವಿದ್ಯಾ ಮುರಗೋಡ, ಸುಮಿತ್ರಾ ಕೋಡಬಳಿ, ಜ್ಯೋತಿ ಆಲೂರ, ವಂದನಾ ಭಟ್ಟಡ, ಎ.ಎಚ್. ಮುದ್ದೇಬಿಹಾಳ, ಆರ್.ಬಿ. ಚಂದರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net