

ಅಮರೇಶ ಚಿಲ್ಕರಾಗಿ ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿಯಿಂದಾಗಿ ತಾಲೂಕಿನ ಬಹುತೇಕ ಕೃಷಿ ಜಮೀನು ನೀರಾವರಿಗೆ ಒಳಪಟ್ಟರೂ ಜಾನುವಾರುಗಳು ಮೇವಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ರೈತರು ವಾಣಿಜ್ಯ ಬೆಳೆಗಳಿಗೆ ಮೊರೆ ಹೋಗಿದ್ದರಿಂದ ಮೇವಿನ ಕೊರತೆಯಾಗುತ್ತಿದೆ. ನೀರಾವರಿ ಪ್ರದೇಶದ ರೈತರು ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯುತ್ತಿರುವುದು ಮೇವಿನ ಕೊರತೆಗೆ ಕಾರಣವಾಗಿದೆ.
ಬಹುತೇಕ ರೈತರು ಎತ್ತುಗಳ ಬದಲಿಗೆ ತಾಂತ್ರಿಕ ಕೃಷಿಯ ಮೊರೆಹೋಗಿದ್ದು, ವಾಣಿಜ್ಯ ಬೆಳೆಗಳತ್ತ ಆಸಕ್ತಿ ತೋರುತ್ತಿದ್ದಾರೆ. ಸಣ್ಣ ರೈತರು, ಆಕಳು, ಎಮ್ಮೆಗಳನ್ನು ಸಾಕಿದವರು ಹಾಗೂ ಕುರಿ-ಮೇಕೆ ಸಾಕಣೆ ಮಾಡುವವರು ಮೇವಿಗಾಗಿ ಪರಿತಪಿಸುವ ಸ್ಥಿತಿಯಿದೆ. ದೊಡ್ಡ ರೈತರು ಮನೆಗೆ ಬೇಕಾದಷ್ಟು ಜೋಳ, ಸಜ್ಜೆ, ಶೇಂಗಾ, ಭತ್ತ, ತೊಗರಿ, ಹತ್ತಿ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಇದರಿಂದ ಮೇವಿನ ಕೊರತೆ ಹೆಚ್ಚಾಗಿದ್ದು ಬೇರೆ ಕಡೆಯಿಂದ ಖರೀದಿ ಮಾಡುವಂತಾಗಿದೆ.
ವಾಣಿಜ್ಯ ಬೆಳೆಗಳಾದ ಮೆಣಸಿನಕಾಯಿ ಹಾಗೂ ಹತ್ತಿಗೆ ಮೇವಿನ ಉಪಉತ್ಪನ್ನವಿಲ್ಲ. ತೊಗರಿ ಬೆಳೆಗೆ ಹೊಟ್ಟು ಬಂದರೂ ಸಂಗ್ರಹಕ್ಕೆ ಯೋಗ್ಯವಲ್ಲ. ಭತ್ತವನ್ನು ಬಹತೇಕ ಯಂತ್ರದ ಮೂಲಕ ಕಟಾವು ಮಾಡುತ್ತಿರುವುದರಿಂದ ಬಹುತೇಕ ಮೇವು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಎತ್ತುಗಳನ್ನು ಸಾಕಿದ ರೈತರು ಮೇವು ಸಂಗ್ರಹಿಸಿದರೆ, ಉಳಿದವರು ಹೊಲ ಸ್ವಚ್ಛ ಮಾಡಲು ಮೇವಿಗೆ ಬೆಂಕಿ ಹಚ್ಚುತ್ತಾರೆ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರು ವಾಣಿಜ್ಯ ಬೆಳೆಗಳಿಗೆ ವರದಾನವಾಗಿದೆ. ಇದರಿಂದಾಗಿ ಜೋಳ, ಸಜ್ಜೆ, ಶೇಂಗಾ, ಕಡಲೆ ಬೆಳೆಗಳು ಕ್ಷೀಣಿಸಿವೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಬಯಲು ಪ್ರದೇಶ, ಗುಡ್ಡಗಾಡು, ಹೊಲದ ಬದುವಿನ ಮೇವು ಜಾನುವಾರುಗಳಿಗೆ ಸಿಗುತ್ತದೆ. ಬೇಸಿಗೆ ಕಾಲದಲ್ಲಿ ಎಲ್ಲವೂ ಒಣಗಿ ಬಣಗುಡುತ್ತಿದ್ದು, ಜಮೀನಿನಿಂದ ಜಮೀನಿಗೆ ಮೇವಿಗಾಗಿ ಅಲೆಯುವಂತ ಸ್ಥಿತಿಯಿದೆ.
ಇನ್ನು ಕುಡಿವ ನೀರಿಗಾಗಿಯೂ ಜಾನುವಾರುಗಳ ಅಲೆಯುತ್ತಿರುವುದು ಸಾಮಾನ್ಯವಾಗಿದೆ. ನಾರಾಯಣಪುರ ಬಲದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ಬಳಿಕ ಸಮಸ್ಯೆಯಾಗಿದೆ. ಕೃಷ್ಣಾ ನದಿ ತೀರದಲ್ಲಿರುವ ಜಾನುವಾರುಗಳಿಗೆ ಹೆಚ್ಚಿನ ಸಮಸ್ಯೆ ಇಲ್ಲ ಎನ್ನಬಹುದು.
ದೇವದುರ್ಗದಲ್ಲಿ ಬಿಡಾಡಿ ದನಗಳು ಮೇವು ತಿನ್ನುವುದನ್ನೇ ಮರೆತಿದ್ದು, ಮನೆ ಮನೆಗೆ ಅಲೆದು ರೊಟ್ಟಿ, ತರಕಾರಿ ಸೇವಿಸುತ್ತಿವೆ. ಕೊಳೆತ ಹಣ್ಣು-ಹಂಪಲು ಕೂಡ ಆಹಾರವಾಗಿವೆ. ಕೆಲವು ಹಸುಗಳು ಪ್ಲಾೃಸ್ಟಿಕ್ ವಸ್ತುಗಳನ್ನು ತಿಂದು ಅನಾರೋಗ್ಯದಿಂದ ಬಳಲುತ್ತಿವೆ. ಪಟ್ಟಣದಲ್ಲಿ ನೂರಾರು ಬಿಡಾಡಿ ದನಗಳಿವೆ. ಜಾಲಹಳ್ಳಿ ಹಾಗೂ ಗಬ್ಬೂರಿನಲ್ಲೂ ಬಿಡಾಡಿ ದನಗಳು ಹೆಚ್ಚಿವೆ. ತಾಲೂಕಿನಲ್ಲಿ ಸರ್ಕಾರದಿಂದ ಗೋಶಾಲೆ ಆರಂಭಿಸಿಲ್ಲ. ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾನ ಮಠ ಹಾಗೂ ಸುಲ್ತಾನಪುರ ಪಂಚಾಕ್ಷರಿ ಬೃಹನ್ಮಠದಲ್ಲಿ ತಲಾ ಒಂದು ಗೋಶಾಲೆಯಿದೆ. ಮೇವು ಬ್ಯಾಂಕ್ ಅನ್ನು ಎಲ್ಲಿಯೂ ಆರಂಭಿಸಿಲ್ಲ. ಖಾಸಗಿಯಾಗಿ ರೈತರು ಮೇವು ಖರೀದಿಸಿ ತರುವ ಸ್ಥಿತಿಯಿದೆ.
ಒಂದೆರಡು ಪಶುಗಳನ್ನು ಸಾಕಿರುವವರು ಹಣ ಕೊಟ್ಟು ಭತ್ತದ ಹುಲ್ಲು, ಜೋಳದ ಸೊಪ್ಪೆ, ಶೇಂಗಾ ಹೊಟ್ಟು ತರಿಸಿಕೊಂಡರೆ ಬೇಸಿಗೆ ಕಳೆಯಬಹುದು. ಆದರೆ, ನೂರಾರು ಕುರಿ, ಮೇಕೆಗಳನ್ನು ಸಾಕಿರುವ ಮಾಲೀಕರು ಬೇಸಿಗೆಯಲ್ಲಿ ಮೇವಿಗಾಗಿ ಅಲೆಯುವಂತಾಗಿದೆ. ಮೇವಿಗಾಗಿ ಕುರಿಗಳು, ಆಡುಗಳನ್ನು ಹೊಲದಿಂದ ಹೊಲಕ್ಕೆ ಕರೆದುಕೊಂಡು ಅಲೆಯುಂತಾಗಿದೆ. ದಿನೇದಿನೆ ಮೇವಿನ ಬೆಲೆ ಕೂಡ ಹೆಚ್ಚುತ್ತಿರುವುದರಿಂದ ಸಾಕಣೆದಾರರು ಸಮಸ್ಯೆ ಎದುರಿಸುವಂತಾಗಿದೆ.
ತಾಲೂಕು ನೀರಾವರಿಗೆ ಒಳಪಡುವ ಮುನ್ನ ಶೇಂಗಾ, ಜೋಳ, ಸಜ್ಜೆ, ಕಡಲೆ ಬೆಳೆಯುತ್ತಿದ್ದು, ವರ್ಷವಿಡೀ ಮೇವು ಸಿಗುತ್ತಿತ್ತು. ನಾರಾಯಣಪುರ ಬಲದಂಡೆ ನಾಲೆ ಬಂದ ನಂತರ ವಾಣಿಜ್ಯ ಬೆಳೆಗಳು ರೈತರ ಜಮೀನಿಗೆ ಲಗ್ಗೆ ಹಾಕಿವೆ. ಇದರಿಂದ ಮೇವಿನ ಕೊರತೆಯಾಗಿ ಜಾನುವಾರುಗಳ ಸಂಖ್ಯೆಯೂ ಕುಸಿದಿದೆ. ಜೋಳ, ಸಜ್ಜೆ, ಶೇಂಗಾ, ಕಡಲೆ, ತೊಗರಿಯಿಂದ ಉಪ ಉತ್ಪನ್ನ ಸೊಪ್ಪೆ, ಶೇಂಗಾಹೊಟ್ಟು, ಕಡಲೆ ತೌಡು, ತೊಗರಿಹಿಂಡಿ ಸಿಗುತ್ತಿತ್ತು. ಆದರೆ, ಮೆಣಸಿನಕಾಯಿ, ಹತ್ತಿಯಿಂದ ಯಾವುದೇ ಉಪಉತ್ಪನ್ನ ಸಿಗಲ್ಲ. ತಾಲೂಕಿನಲ್ಲಿ ಶೇ.70 ಕೃಷಿ ಜಮೀನಿನಲ್ಲಿ ಮೆಣಸಿನಕಾಯಿ, ಹತ್ತಿ, ಭತ್ತ ಬೆಳೆಯಲಾಗುತ್ತಿದೆ.
ತಾಲೂಕಿನಲ್ಲಿ ಮೇವಿಗೆ ಹೆಚ್ಚಿನ ಬೆಲೆ ತೆರಬೇಕಾಗಿದೆ. ಇದರಿಂದಾಗಿ ಜಾನುವಾರುಗಳಿಗೆ ಮೇವು ಸಂಗ್ರಹಿಸಿವುದು ಅವುಗಳ ಮಾಲೀಕರಿಗೆ ಸಂಕಷ್ಟದ ಕೆಲಸವಾಗಿದೆ. ಒಂದು ಟ್ರಿಪ್ ಟ್ರ್ಯಾಕ್ಟರ್ ಮೇವಿಗೆ 8ರಿಂದ 10ಸಾವಿರ ರೂ. ಖರ್ಚು ಮಾಡಬೇಕಿದೆ. ಜೋಳ, ಶೇಂಗಾ ಸೊಪ್ಪೆಗೆ 12ರಿಂದ 15 ಸಾವಿರ ರೂ. ಖರ್ಚು ತಗಲುತ್ತದೆ. ಒಂದು ಬಂಡಿ ಭತ್ತದ ಹುಲ್ಲಿಗೆ 2 ಸಾವಿರ ರೂ., ಶೇಂಗಾ ಸೊಪ್ಪೆಗೆ 4ರಿಂದ 5ಸಾವಿರ ರೂ. ಖರ್ಚಿದೆ. ಭತ್ತದ ಹುಲ್ಲು ಕೊಯ್ದ ನಂತರ ಯಂತ್ರದಲ್ಲಿ ಕಟ್ಟುಮಾಡಿ ಪೆಂಡಿ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. 1 ಕಟ್ಟು ಭತ್ತದ ಹುಲ್ಲಿಗೆ 25ರಿಂದ 30 ರೂ. ಬೆಲೆಯಿದೆ.
ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಬಹುತೇಕ ನೀರಾವರಿ ಪ್ರದೇಶವಿರುವ ಕಾರಣ ಭತ್ತದ ಹುಲ್ಲು ಸಾಕಷ್ಟು ಇದೆ. ರೈತರು ಮನವಿ ಮಾಡಿದರೆ ಮೇವಿನ ಬ್ಯಾಂಕ್ ತೆರೆಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ರೈತರು ಭತ್ತದ ಹುಲ್ಲಿಗೆ ಬೆಂಕಿಹಚ್ಚದೆ, ಜಾನುವಾರು ಮೇಯಲು ಬಿಡಬೇಕು.ಡಾ.ಬಸವರಾಜ ಮೀರಸ್‌ದಾರ್ಪಶುಇಲಾಖೆ ಸಹಾಯಕ ನಿರ್ದೇಶಕ, ದೇವದುರ್ಗ
ರೈತರು ಹತ್ತಿ, ಮೆಣಸಿನಕಾಯಿ, ತೊಗರಿ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಮೇವು ಸಿಗುತ್ತಿಲ್ಲ. ಭತ್ತ ಬೆಳೆದರೂ ಯಂತ್ರದಿಂದ ಕೊಯುತ್ತಿದ್ದು, ಹುಲ್ಲು ಸರಿಯಾಗಿ ಬರಲ್ಲ. ಕೆಲವರು ಹುಲ್ಲು ಸುಡುತ್ತಿರುವುದು ಸಮಸ್ಯೆಯಾಗಿದೆ. ಮೇವನ್ನೂ ಹಣಕೊಟ್ಟು ಖರೀದಿಸುವ ಸ್ಥಿತಿ ಬಂದಿದೆ.ಉಮಾಪತಿಗೌಡರೈತ, ನಗರಗುಂಡ
ಗಬ್ಬೂರು, ಸುಲ್ತಾನಪುರದಲ್ಲಿ ಮಠಗಳ ಎರಡು ಗೋಶಾಲೆಯಿವೆ. ರೈತರು ಮೇವಿಗಾಗಿ ತಾಲೂಕು ಆಡಳಿತಕ್ಕೆ ಮನವಿ ಮಾಡಿಲ್ಲ. ಹೀಗಾಗಿ ಮೇವು ಕೇಂದ್ರ ತೆರೆದಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಕುರಿ, ಮೇಕೆಗಳಿಗೆ ಬೇಸಿಗೆಯಲ್ಲಿ ಸಮಸ್ಯೆಯಾಗುತ್ತದೆ.ಶ್ರೀನಿವಾಸ್ ಚಾಪೇಲ್ಗ್ರೇಡ್ 2 ತಹಸೀಲ್ದಾರ್, ದೇವದುರ್ಗ