

ಸಕಲೇಶಪುರ: ತಾಲೂಕಿನಾದ್ಯಂತ ಆಷಾಢದ ಬಿರುಗಾಳಿ ಸಹಿತ ಮಳೆಗೆ ವಾಣಿಜ್ಯ ಬೆಳೆಗಳು ಧರೆ ಸೇರಲಾರಂಭಿಸಿವೆ.
ಮೇ ಮಧ್ಯಭಾಗದಿಂದ ಆರಂಭವಾಗಿರುವ ಮುಂಗಾರು ಆರ್ಭಟ ಬಿಡುವಿಲ್ಲದಂತೆ ಮುಂದುವರಿದಿರುವುದರಿಂದ ಭೂಮಿ ಶೀತಗೊಂಡಿದ್ದು ಬೆಳೆಗಳೆಲ್ಲ ಕೊಳೆಯಲಾರಂಭಿಸಿವೆ. ಸದ್ಯ ಬೆಳೆ ಉಳಿಸಿಕೊಳ್ಳಲು ರಾಸಯಾನಿಕ ಸಂಪಡಿಸಲು ಬೆಳೆಗಾರರು ತುದಿಗಾಲಿನಲ್ಲಿ ನಿಂತಿದ್ದರೂ ಮಳೆ ಬಿಡುವು ನೀಡದಿರುವುದು ಬೆಳೆಗಾರರನ್ನು ಕಂಗಾಲು ಮಾಡಿದೆ.
ತೋಟಗಾರಿಕೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳ ಪ್ರಕಾರ ತಾಲೂಕಿನಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು ಹಾಗೂ ಅಡಕೆ ಬೆಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಮಳೆ ಇದೆ ರೀತಿ ಮುಂದುವರಿದರೆ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗುವುದು ಖಂಡಿತ ಎಂಬುದು ಅಧಿಕಾರಿಗಳ ಮಾತು. ಸದ್ಯ ತಾಲೂಕಿನ ಹೆತ್ತೂರು, ಹಾನುಬಾಳ್ ಹೋಬಳಿ ಹಾಗೂ ಕಸಬಾ ಹೋಬಳಿಯ ಕೆಲವೆಡೆ ಮಳೆ-ಗಾಳಿಗೆ ಸಿಲುಕಿ ಕಾಫಿ ಶೇ.15 ರಿಂದ 20 ರಷ್ಟು ಪ್ರಮಾಣದಲ್ಲಿ ಧರೆ ಸೇರಿದ್ದರೆ, ಅಡಕೆ ಶೇ.50 ರಷ್ಟು ಪ್ರಮಾಣದಲ್ಲಿ ಹಾನಿಗೀಡಾಗಿದೆ. ಈ ನಡುವೆ ಹೀಚಾಗುತ್ತಿರುವ ಮೆಣಸಿನ ಗರಿಗಳು ಬೀಳಲಾರಂಭಿಸಿದ್ದು ಮಳೆ ಹೆಚ್ಚಾದಾರೆ ಹಾನಿ ಪ್ರಮಾಣ ಊಹಿಸುವುದೂ ಕಷ್ಟಕರ ಎನ್ನಲಾಗುತ್ತಿದೆ.
ಹೆತ್ತೂರು ಹೋಬಳಿಯ ಪಶ್ಚಿಮಘಟ್ಟದಂಚಿನಲ್ಲಿರುವ ಕಾಫಿ ತೋಟಗಳಲ್ಲಿ ಬಿರುಗಾಳಿ ಸಹಿತ ಮಳೆಯಿಂದಾಗಿ ಕಾಫಿಗಿಡದ ಎಲೆ ಸೇರಿದಂತೆ ಫಸಲು ನೆಲ ಸೇರಿದ್ದು ಕೇವಲ ಗಿಡದಲ್ಲಿ ಕಡ್ಡಿಗಳು ಗೋಚರಿಸುತ್ತಿವೆ. ಸದ್ಯ ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ತಾಲೂಕಿನ ಹಲವೆಡೆ 260 ರಿಂದ 400 ಮೀ.ಮೀ. ಅಧಿಕ ಮಳೆಯಾಗಿದ್ದು, ಜುಲೈ ಮಧ್ಯಭಾಗಕ್ಕೆ ಈ ಪರಿಯ ಮಳೆಯಾಗಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಈವರೆಗೆ ತಾಲೂಕಿನಲ್ಲಿ ಮಳೆ ಕೊರತೆ ಎದುರಾಗಿದ್ದು, ವಾಡಿಕೆ ಮಳೆಗಾಗಿ ಜನರು ಕಾತರಿಸುತ್ತಿದ್ದರು. ಆದರೆ, ಈ ಬಾರಿ ಬೇಸಿಗೆ ಸವಿ ಜನರಿಗೆ ತಟ್ಟದಂತೆ ಮುಂಗಾರು ಮಳೆ ಸುರಿಯುತ್ತಿರುವುದು ಜನರನ್ನು ನಿದ್ರೆಗೆಡುವಂತೆ ಮಾಡಿದೆ. ಕಳೆದ ಬಾರಿ ಒಟ್ಟಾರೆ ಮಳೆಗಾಲದಲ್ಲಿ ಶೇ.71 ರಷ್ಟು ಅಧಿಕ ಮಳೆಯಾಗಿದ್ದು, ಈ ಮಳೆಗೆ ಮೆಣಸು ಹೇಳ ಹೆಸರಿಲ್ಲದಂತೆ ನೆಲ ಸೇರಿದ್ದರಿಂದ ಮೆಣಸಿನ ಬೆಳೆ ಶೇ.70 ರಷ್ಟು ಕುಸಿತಗೊಂಡಿತ್ತು. ಆದರೆ, ಈ ಬಾರಿ ಜುಲೈ ಮೊದಲ ವಾರದ ಅಂತ್ಯಕ್ಕೆ ಒಟ್ಟಾರೆ ಶೇ.167 ರಷ್ಟು ಮಳೆಯಾಗಿರುವುದು ಮೆಣಸು ಹಾಗೂ ಅಡಕೆ ಫಸಲು ನಿರೀಕ್ಷಿಸುವುದು ಅಸಾಧ್ಯ ಎಂಬುದು ಬೆಳೆಗಾರರ ಮಾತು.
ಮತ್ತಷ್ಟು ಮಳೆ: ಈಗಾಗಲೇ ಮಳೆಯಿಂದಾಗಿ ತಾಲೂಕಿನ ಹಲವೆಡೆ ಅಂತರ್ಜಲ ಉಕ್ಕಲಾರಂಭಿಸಿದ್ದರೆ, ಇಡೀ ಭೂಮಿ ಶೀತಗೊಂಡಿದೆ. ಮಳೆ ಬಿಡುವು ನೀಡಿದರೆ ಸಾಕು ಎಂಬ ನಿರೀಕ್ಷೆ ಬೆಳೆಗಾರರದ್ದಾಗಿದೆ. ಆದರೆ ಹವಾಮಾನ ಇಲಾಖೆಯ ವರದಿ ಪ್ರಕಾರ ಜು.15 ರಿಂದ ಆಗಸ್ಟ್ ಮೊದಲ ವಾರದವರೆಗೆ ಭಾರಿ ಮಳೆಯಾಗಲಿದೆ ಎನ್ನಲಾಗುತ್ತಿದೆ. ಈ ವರದಿ ಬೆಳೆಗಾರರನ್ನು ನಡುಗುವಂತೆ ಮಾಡಿದೆ.
ಆರಂಭವಾಗದ ನಾಟಿ: ಸದ್ಯ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಜುಲೈ ಮೊದಲು ಹಾಗೂ ಎರಡನೇ ವಾರದಲ್ಲಿ ಬಿರುಸುಗೊಳ್ಳುತ್ತಿದ್ದ ನಾಟಿ ಕಾರ್ಯ ಈ ಬಾರಿ ವಿಳಂಬವಾಗಿದೆ. ಈವರೆಗೆ ತಾಲೂಕಿನಲ್ಲಿ ಕೈಬೆರಳೆಣಿಕೆಯ ರೈತರು ಮಾತ್ರ ನಾಟಿ ಕಾರ್ಯ ಮುಗಿಸಿದ್ದು, ಆಗಸ್ಟ್ ಅಂತ್ಯದವರಗೂ ನಾಟಿ ಕಾರ್ಯ ಈ ವರ್ಷ ಮುಂದುವರಿಯಲಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾತು. ಮಳೆಯೊಂದಿಗೆ ಅಧಿಕ ಶೀತಾಂಶ ಇರುವ ಕಾರಣ ಭತ್ತದ ಮಡಿ ಸೊಗಸಾಗಿ ಬೆಳೆಯದಾಗಿದೆ ಎನ್ನಲಾಗುತ್ತಿದೆಯಾದರೂ ಕೆಲವೆಡೆ ಭತ್ತದ ಮಡಿಗಳಿಗೆ ನೀರು ಆವರಿಸಿ ಹಾನಿಗೀಡಾಗಿದೆ.
ಮೈದುಂಬಿವೆ ನದಿ ತೊರೆಗಳು: ತಾಲೂಕಿನ ಜೀವನದಿ ಹೇಮಾವತಿ ಒಡಲು ಸೇರಿದಂತೆ ತಾಲೂಕಿನ ಎಲ್ಲ ನದಿಗಳೂ ಉಕ್ಕಿ ಹರಿಯುತ್ತಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಮಗಜಹಳ್ಳಿ, ಅತ್ತಿಹಳ್ಳಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿವೆ.
ಅಪಾಯಕಾರಿ ಹೆದ್ದಾರಿ: ಸದ್ಯ ಮಳೆ ಬಿರುಸು ಕಡಿಮೆ ಇರುವ ಕಾರಣ ಭೂಕುಸಿತ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆಯಾದರೂ ಬಿರುಗಾಳಿ ಹೆಚ್ಚಿರುವುದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿತ್ಯ ಮರಗಳು ಧರೆಗೆ ಉರುಳುತ್ತಿದೆ. ಸೋಮವಾರ ಒಂದೇ ದಿನ ಗಡಿ ಚೌಡೇಶ್ವರಿ ದೇವಸ್ಥಾನ ಸಮೀಪ ಬೃಹತ್ ಮರ ಧರೆಗೆ ಉರುಳಿ ಸುಮಾರು ಎರಡು ಗಂಟೆಗಳ ಕಾಲ ಹೆದ್ದಾರಿ ಬಂದ್ ಆಗಿದ್ದರೆ, ಡಬಲ್ ತಿರುವು ಸಮೀಪ ಮರದ ರೆಂಬೆ ಹೆದ್ದಾರಿಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹೆದ್ದಾರಿ ಅಪಾಯದಂಚಿನಲ್ಲಿರುವ ದೋಣಿಗಾಲ್ ಗ್ರಾಮ ಸಮೀಪ ಸಹ ಮರ ಧರೆಗೆ ಉರುಳಿ ಸಮಸ್ಯೆ ಸೃಷ್ಟಿಸಿತ್ತು. ಕಳೆದ ಒಂದು ವಾರದಲ್ಲಿ ಹೆಗದ್ದೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆವರೆಗೆ 23 ಮರಗಳು ಹಾಗೂ ಮರದ ರೆಂಬೆಗಳು ಹೆದ್ದಾರಿಗೆ ಉರುಳಿ ಸಮಸ್ಯೆ ಸೃಷ್ಟಿಸಿದ್ದು ಮಳೆಗಾಲದಲ್ಲಿ ಶಿರಾಡಿ ಘಾಟ್ ಸಂಚಾರ ಬಲು ಅಪಾಯಕಾರಿಯಾಗಿ ಪರಿಣಮಿಸಿದೆ.
ಅತಿಯಾದ ಮಳೆ ಹಾಗೂ ಗಾಳಿಯಿಂದಾಗಿ ಕಳೆದ ಮಾರ್ಚ್‌ನಿಂದ ಈವರೆಗೆ 267 ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದರೆ, ಒಂದು ಟ್ರಾನ್ಸ್‌ಫಾರ್ಮರ್ ದುರಸ್ತಿಗೀಡಾಗಿದೆ.
ಅತಿಯಾದ ಮಳೆಯ ಕಾರಣ ತಾಲೂಕಿನಲ್ಲಿ ಇನ್ನೂ ಭತ್ತದ ನಾಟಿ ಕಾರ್ಯ ಆರಂಭವಾಗಿಲ್ಲ. ಈ ಬಾರಿ ಆಗಸ್ಟ್ ಅಂತ್ಯದವರೆಗೂ ನಾಟಿ ಕಾರ್ಯ ಮುಂದುವರಿಯುವ ಸಾಧ್ಯತೆ ಇದ್ದು, ಈವರೆಗೆ ತಾಲೂಕಿನಲ್ಲಿ ಶೇ.167 ರಷ್ಟು ಅಧಿಕ ಮಳೆಯಾಗಿದೆ.
ಪ್ರಕಾಶ್ ಕುಮಾರ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ವಾಣಿಜ್ಯ ಬೆಳೆಗಳಾದ ಕಾಫಿ, ಅಡಕೆ ಹಾಗೂ ಮೆಣಸಿನ ಬೆಳೆ ಸಹ ಅಧಿಕ ಶೀತಾಂಶದಿಂದ ಹಾನಿಗೀಡಾಗಿದೆ. ಮಳೆ ಹೀಗೆ ಮುಂದುವರಿದರೆ ಹಾನಿ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.
ಬಸವರಾಜ್ ಎಸ್‌ಎಲ್‌ಒ, ಕಾಫಿ ಮಂಡಳಿ