

ಮಂಡ್ಯ: ವಿದ್ಯಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸುವುದರ ಜತೆಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಉಮೇಶ್ ಸಲಹೆ ನೀಡಿದರು.
ಇಲ್ಲಿನ ಕುವೆಂಪುನಗರ ಬಡಾವಣೆಯಲ್ಲಿರುವ ಆದರ್ಶ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಆದರ್ಶ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆ ಉದ್ಘಾಟನೆ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಾನೂ ಕಾಮರ್ಸ್ ತೆಗೆದುಕೊಂಡೆ. ಆ ಬಳಿಕ ಬದಲಾವಣೆ ಮಾಡಿಕೊಂಡಿದ್ದೆ. ಆ ಸಮಯದಲ್ಲಿ ನನ್ನ ತಂದೆ ಬುದ್ದಿ ಹೇಳಿ ಮತ್ತೆ ಕಾಮರ್ಸ್ ಕೊಡಿಸಿದರು. ನಂತರ ಅದೇ ಕಾಲೇಜಿಗೆ ಟಾಪರ್ ಆದೆ ಎಂದರು.
ಆದರ್ಶ ಪಿಯು ಕಾಲೇಜಿನ ಸ್ಥಾಪಕ ಡಾ.ಮೂರ್ತಿ ಮಾತನಾಡಿ, ಶಿಕ್ಷಣ ಕಲಿಸುವುದು ತುಂಬ ಇಷ್ಟ. ಅದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ವಿದ್ಯಾರ್ಥಿಗಳ ಜೀವನವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ತರಲು ಉಪನ್ಯಾಸಕರು ಶ್ರಮಿಸಬೇಕು ಎಂದರು.
ಉಪನ್ಯಾಸಕರಾದ ಲಿಂಗೇಗೌಡ, ಹನುಮಂತಯ್ಯ, ಮಲ್ಲೇಶ್, ಅಭಿಷೇಕ್,ಪ್ರಾಂಶುಪಾಲ ಎಸ್.ಡಿ.ದೊಡ್ಡಚಾರ್, ಜಿ.ಎಂ.ನಾಗೇಶ್, ಭೈರೇಶ್, ಡಿ.ನಾಗರಾಜು, ನಂಜುಂಡಸ್ವಾಮಿ, ಬಸವೇಗೌಡ ಇತರರು ಇದ್ದರು.