ಪಕ್ಷದ ಕಾರ್ಯಕ್ರಮವಾದ ಶ್ರೀರಂಗಪಟ್ಟಣ ದಸರಾ: ರೈತ ಸಂಘದ ಮುಖಂಡ ಕಿರಂಗೂರು ಪಾಪು ಬೇಸರ

kiranguru papu3
Published on

ಮಂಡ್ಯ: ಶ್ರೀರಂಗಪಟ್ಟಣ ಐತಿಹಾಸಿಕ ದಸರಾವನ್ನು ಅರ್ಥಪೂರ್ಣ, ವ್ಯವಸ್ಥಿತವಾಗಿ ಆಚರಣೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ವಿಫಲರಾಗಿದ್ದಾರೆ. ಜತೆಗೆ ಒಂದು ಪಕ್ಷ ಆಯೋಜನೆ ಮಾಡಿದಂತೆ ಎದ್ದುಕಾಣುತ್ತಿದೆ ಎಂದು ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು ಆರೋಪಿಸಿದ್ದಾರೆ.

ದಸರಾಗೆ 3 ಕೋಟಿ ರೂ.ಗೂ ಅಧಿಕ ಅನುದಾನ ಬಂದಿದ್ದರೂ ಸರಿಯಾದ ರೀತಿಯಲ್ಲಿ ದೀಪಾಲಂಕಾರ ಮಾಡಿಲ್ಲ. ಚಾಮುಂಡಿ ದೇವರನ್ನು ಹೊತ್ತಿ ಅಂಬಾರಿ ಮೆರವಣಿಗೆಯಲ್ಲಿ ಆಕರ್ಷಕವಾದ ಅರ್ಥಪೂರ್ಣವಾದ ಜಾನಪದ ಸ್ತಬ್ಧಚಿತ್ರಗಳು, ಕಲಾತಂಡವೂ ಇರಲಿಲ್ಲ. ಕೋಟೆಗಳ ಮೇಲೆ ಗಿಡಗೆಂಟೆ ಬೆಳೆದಿದ್ದರೂ ಅದನ್ನು ಸ್ವಚ್ಛ ಮಾಡಿಸಿಲ್ಲ. ಗೋಡೆಯ ಮೇಲೆ ಹಳೆಯ ಬಣ್ಣಬಣ್ಣದ ಬಟ್ಟೆ ಹಾಕಿ ತೇಪೆ ಹಾಕಲಾಗಿದೆ. ಒಳಗೆಲ್ಲ ಉಳುಕು ಮೇಲೆಲ್ಲ ಥಳಕು ಎಂಬ ಗಾಧೆ ಮಾತು ಇಲ್ಲಿ ಅನ್ವಯವಾಗುತ್ತದೆ ಎನ್ನಬಹುದು.

ಶ್ರೀರಂಗನಾಥಸ್ವಾಮಿಯ ವೇದಿಕೆಯ ಮೇಲೆ ಗುಣಮಟ್ಟದ ಅರ್ಥಪೂರ್ಣವಾದ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಮಾಡಲು ಕೂಡ ವಿಫಲರಾಗಿದ್ದಾರೆ. ಸಾರಿಗೆ ವ್ಯವಸ್ಥೆ ಕೂಡ ಸಮರ್ಪಕವಾಗಿ ಮಾಡಿಲ್ಲ. ಆಕರ್ಷಕವಾದ ಗ್ರಾಮೀಣ ಕ್ರೀಡೆಗಳು, ರೈತ ದಸರಾ, ಯುವ ದಸರಾ, ಮಹಿಳಾ ದಸರಾ, ಆಟೋಪಚಾರಗಳು ಮನಸೂರೆಗೊಳ್ಳುವಂಥ ಕಾರ್ಯಕ್ರಮಗಳನ್ನು ಆಯ್ಕೆ ಮಾಡಲು ವಿಫಲರಾಗಿದ್ದಾರೆ. ಕಿರಂಗೂರು ಬನ್ನಿಮಂಟಪ ಅಲಂಕಾರ ಇಲ್ಲದೆ ಬಿಕೋ ಎನ್ನುತ್ತಿದೆ. ಬನ್ನಿಮಂಟಪದ ಸ್ಥಳದಿಂದ ದಸರಾ ಆನೆ ಅಂಬಾರಿ ಹೊರಟ ಮೇಲೆ ಅಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲಿ ಮುಳುಗಿತ್ತು. ಪಕ್ಷಾತೀತವಾಗಿ ಸಂಘಸಂಸ್ಥೆ, ಸಾರ್ವಜನಿಕರ, ರೈತ ಸಮೂಹವನ್ನು ಕರೆದುಕೊಂಡು ದಸರಾ ಮಾಡಿದಂತೆ ಕಾಣುತ್ತಿಲ್ಲ. ಆದ್ದರಿಂದ ದಸರಾಗೆ ಬಿಡುಗಡೆಯಾಗಿರುವ ಹಣ. ಖರ್ಚು ಮತ್ತು ವೆಚ್ಚವನ್ನು ಸಾರ್ವಜನಿಕರ ಮುಂದಿಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net