ವಾಣಿಜ್ಯ ವಿಭಾಗದಲ್ಲಿ ಎಕ್ಸೆಲ್ ಹೊಸ ಶಕೆ : ಫಾ.ಕ್ಲಿಫರ್ಡ್ ಎಸ್. ಪಿಂಟೋ ಹಾರೈಕೆ

excel
ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವದಲ್ಲಿ ಹೋಲಿ ರೆಡಿಮರ್ ಶಾಲೆ ಮುಖ್ಯಶಿಕ್ಷಕ ಫಾದರ್ ಕ್ಲಿಫರ್ಡ್ ಎಸ್.ಪಿಂಟೋ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾಲೇಜಿನ ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಎಕ್ಸೆಲ್ ವಿದ್ಯಾಸಂಸ್ಥೆ ನೂತನವಾಗಿ ವಾಣಿಜ್ಯ ವಿಭಾಗದಲ್ಲೂ ಹೊಸ ಶಕೆಯನ್ನು ಬರೆಯ ಹೊರಟಿದೆ. ಸಿಎ ಫೌಂಡೇಷನ್ ಕೋರ್ಸ್‌ನಲ್ಲಿ ಮಕ್ಕಳಿಗೆ ರಾಜ್ಯಮಟ್ಟದ ಉತ್ತಮ ರ‌್ಯಾಂಕ್ ತಂದು ಕೊಟ್ಟ ಅಧ್ಯಾಪಕರನ್ನು ಹೊಂದಿರುವುದು ಗಮನಾರ್ಹವಾಗಿದೆ ಎಂದು ಹೋಲಿ ರೆಡಿಮರ್ ಶಾಲೆಯ ಮುಖ್ಯಶಿಕ್ಷಕ ಫಾ.ಕ್ಲಿಫರ್ಡ್ ಎಸ್. ಪಿಂಟೋ ಹೇಳಿದರು.

ಸೋಮವಾರ ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಎಕ್ಸೆಲ್ ಇನ್ ಕಾಮರ್ಸ್, ಎಕ್ಸೆಲ್ ಇನ್‌ಲೈಫ್ ಉದ್ಘೋಷದೊಂದಿಗೆ ಉದ್ಘಾಟಿಸಿ ಮಾತನಾಡಿ, ಸಾಧನೆಯ ಹಾದಿಗೆ ಜಾಗತಿಕ ಮಟ್ಟದಲ್ಲಿ ತೆರೆದ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸುವಂತೆ ಮಾರ್ಗದರ್ಶನ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಕೇವಲ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ನಮ್ಮ ಸಂಸ್ಥೆ ಇನ್ನು ಮುಂದೆ ವಾಣಿಜ್ಯ ವಿಭಾಗದಲ್ಲೂ ಸಾಧನೆಗೆ ಅಣಿಯಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಎಲ್ಲ ಸೌಕರ್ಯವನ್ನು ಹಾಗೂ ವಿದ್ಯಾರ್ಜನೆಗೆ ಬೇಕಾದ ಎಲ್ಲ ಸಹಕಾರವನ್ನು ನೀಡುತ್ತಿದ್ದೇವೆ. ಉತ್ತಮ ಅನುಭವ ಇರುವ ಮತ್ತು ರಾಜ್ಯದಲ್ಲಿ ಸಿಎ., ಸಿಎಸ್ ಕೋರ್ಸ್‌ಗಳಲ್ಲಿ ಅತ್ಯಂತ ಹೆಚ್ಚು ಫಲಿತಾಂಶಕ್ಕೆ ಅಡಿಪಾಯ ಹಾಕುವ ಅಧ್ಯಾಪಕ ವರ್ಗವನ್ನು ಎಕ್ಸೆಲ್ ಸಂಸ್ಥೆ ಹೊಂದಿರುತ್ತದೆ ಎಂದರು.

ಕಾಲೇಜಿನ ಕಾರ್ಯದರ್ಶಿ ಅಭಿರಾಮ್ ಬಿ.ಎಸ್., ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ, ಶಾಂತಿರಾಜ್ ಜೈನ್, ಕೀರ್ತಿನಿಧಿ ಜೈನ್, ರಿಚರ್ಡ್ ಜೀವನ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಸನ್ನ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಡೀನ್ ಸಂತೋಷ್ ನಿರೂಪಿಸಿ ಪ್ರಭಾಕರ್ ಸ್ವಾಗತಿಸಿ, ರವಿ ವಂದಿಸಿದರು.

ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಥಮ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಾಗಿ ಎಕ್ಸೆಲ್ ವಿದ್ಯಾಸಂಸ್ಥೆ ಗುರುತಿಸಿಕೊಂಡಿದ್ದು, ಇಂದಿನ ಕಾಲದಲ್ಲಿ ವಾಣಿಜ್ಯ ವಿಭಾಗದ ಗಣನೀಯ ಬದಲಾವಣೆಗಳು ಮಕ್ಕಳಿಗೆ ವ್ಯಾಪಕ ಅವಕಾಶಗಳನ್ನು ನೀಡುತ್ತಿದೆ. ಇ-ಕಾಮರ್ಸ್, ಡಿಜಿಟಲೀಕರಣ, ವಾಣಿಜ್ಯ ತೆರಿಗೆ ವಿಭಾಗ, ಹೆಚ್ಚಿದ ವ್ಯಾಪಾರ ವಹಿವಾಟುಗಳಿಂದಲಾಗಿ ಮುಕ್ತ ಉದ್ಯೋಗದ ಅವಕಾಶ ಸಾಧ್ಯವಾಗಿದೆ.- ಫಾ.ಕ್ಲಿಫರ್ಡ್ ಎಸ್. ಪಿಂಟೋ, ಹೋಲಿ ರೆಡಿಮರ್ ಶಾಲೆಯ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net