ಕೆ.ಆರ್.ನಗರ ಸಮಗ್ರ ಅಭಿವೃದ್ಧಿಯ ಗುರಿ

11 KRN-1...
ಕೆ.ಆರ್.ನಗರದ ಶ್ರೀರಾಮ ಬಡಾವಣೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಕೆ.ಎನ್.ಬಸಂತ್, ಜಿ.ಡಿಂಡಿಮಶಂಕರ್, ಶಿವುನಾಯಕ್, ಅಶ್ವಿನಿ ಪುಟ್ಟರಾಜು ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಯೋಜನಾಬದ್ಧವಾಗಿ ನಿರ್ಮಾಣಗೊಂಡಿರುವ ಪಟ್ಟಣದ ಸಮಗ್ರ ಅಭಿವೃದ್ಧಿಯ ಗುರಿ ಹೊಂದಲಾಗಿದ್ದು, ಅದಕ್ಕೆ ಅಗತ್ಯ ಅನುದಾನ ತರಲು ಬದ್ಧನಾಗಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ 4ನೇ ವಾರ್ಡಿನ ವ್ಯಾಪ್ತಿಯ ಶ್ರೀರಾಮ ಬಡಾವಣೆಯಲ್ಲಿ ಐಡಿಎಸ್‌ಎಂಟಿ ಯೋಜನೆಯ ಅನುದಾನ 1.3 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್‌ಗಳ ಜನರು ಬಯಸಿದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದ್ದು, 12.5 ಕೋಟಿ ರೂ.ಗಳನ್ನು ಶಾಸಕರ ನಿಧಿಯಿಂದ ಪಟ್ಟಣದ ಅಭಿವೃದ್ಧಿಗೆ ನೀಡಲಾಗಿದೆ. ಬಯಲು ರಂಗ ಮಂದಿರವನ್ನು ಅಭಿವೃದ್ಧಿಪಡಿಸಲು 1.5 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬಸವೇಶ್ವರ ಬಡಾವಣೆಯಲ್ಲಿರುವ ದೇವೀರಮ್ಮ ಶಿಶುವಿಹಾರ ಮೈದಾನ ಮತ್ತು ಮಹಾತ್ಮಗಾಂಧಿ ಉದ್ಯಾನವನ ಅಭಿವೃದ್ಧಿಗೆ ತಲಾ 25 ಲಕ್ಷ ರೂ. ಅನುದಾನ ನೀಡಲಾಗಿದ್ದು, ಸಂಚಾರ ದಟ್ಟಣೆ ಮತ್ತು ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಪಟ್ಟಣ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪಟ್ಟಣದ ಜನತೆಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಅಮೃತ್-02 ಯೋಜನೆಯಡಿ 30 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ನಂತರ ಜನತೆಗೆ ಶುದ್ಧವಾದ ಕುಡಿಯುವ ನೀರು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹೊಸ ಬಡಾವಣೆಗಳು ಸೇರಿದಂತೆ ಅಗತ್ಯವಿರುವೆಡೆಗೆ ಒಳಚರಂಡಿ ಸೌಕರ್ಯ ಕಲ್ಪಿಸಲು ಸರ್ಕಾರದಿಂದ 20 ಕೋಟಿ ರೂ. ಮಂಜೂರು ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಅರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಮಾಡುವುದನ್ನು ರದ್ದುಪಡಿಸಿ ಹಾಲಿ ಇರುವ ರಸ್ತೆಯನ್ನೇ ವಿಸ್ತರಣೆಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಹಾಸನ-ಮೈಸೂರು ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಪಾಳು ಬಿದ್ದಿರುವ ವಸತಿ ಗೃಹಗಳನ್ನು ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಿರ್ಧರಿಸಿ ನೀಲಿನಕ್ಷೆ ತಯಾರಿಸಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪಟ್ಟಣಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಆಹ್ವಾನಿಸಿ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದರು.

ಇದಕ್ಕೂ ಮೊದಲು 12ನೇ ವಾರ್ಡಿನ ಕಂಠೇನಹಳ್ಳಿ ಬಡಾವಣೆಯಲ್ಲಿ ಉದ್ಯಾನವನ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಪುರಸಭಾಧ್ಯಕ್ಷ ಶಿವುನಾಯಕ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್, ಕಸಾಪ ಅಧ್ಯಕ್ಷ ಜಿ.ಡಿಂಡಿಮಶಂಕರ್, ಪುರಸಭಾ ಸದಸ್ಯರಾದ ಅಶ್ವಿನಿ ಪುಟ್ಟರಾಜು, ಶಂಕರ್‌ಸ್ವಾಮಿ, ಮಿಕ್ಸರ್‌ಶಂಕರ್, ನಟರಾಜು, ಕೆ.ಜಿ.ಸುಬ್ರಹ್ಮಣ್ಯ, ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಪುಟ್ಟು, ಗೌತಮ್, ಆದರ್ಶ, ವೈ.ಎಸ್.ಜಯಂತ್, ಗುತ್ತಿಗೆದಾರರಾದ ಎಸ್.ಸಾಗರ್, ಮನುಗನಹಳ್ಳಿ ರಾಜಯ್ಯ, ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net