

ಮೈಸೂರು: ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಉನ್ನತಮಟ್ಟದ ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಗೊಳ್ಳಲಿದ್ದು, ದೇಶದಲ್ಲಿ ಮೊಟ್ಟ ಮೊದಲಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ಸೌಲಭ್ಯ ನೀಡುವ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.
ವಿಶ್ವವಿದ್ಯಾಲಯದಿಂದ ಕೆಲ ಕೆಲಸಗಳು ಬಾಕಿಯಿದ್ದು, ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂನ್ 24ರಂದು ಆರಂಭಗೊಳ್ಳಲಿದೆ ಎಂದು ಇಲ್ಲಿನ ಸಾತಗಳ್ಳಿಯ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ತಿಳಿಸಿದರು. ಇದಕ್ಕೂ ಮುನ್ನ ಕುವೆಂಪು ಮಲ್ಟಿಮೀಡಿಯಾ ಸೆಂಟರ್, ಭೌತಶಾಸ್ತ್ರ, ರಸಾಯನಶಾಸ್ತ್ರ, ಎಂಬಿಎ ವಿಭಾಗದ ಡಿಜಿಟಲ್ ಮಾರ್ಕೆಟಿಂಗ್ ಪ್ರಯೋಗಾಲಯ ವನ್ನು ಉದ್ಘಾಟಿಸಿದರು.
ವಿಶ್ವವಿದ್ಯಾಲಯದಿಂದ ಸಂಶೋಧನೆ ಮತ್ತು ಆಡಳಿತಾತ್ಮಕ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಉತ್ತಮ ದೂರದೃಷ್ಟಿಯುಳ್ಳವರ ಮುಂದಾಳತ್ವದಲ್ಲಿ ನಾಲ್ಕು ಸಂಶೋಧನಾ ಕ್ಲಸ್ಟರ್ ಆರಂಭಿಸ ಲಾಗುವುದು. ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ ವಿಭಾಗದಲ್ಲಿ ಕ್ಲಸ್ಟರ್ ಆರಂಭಗೊಳ್ಳಲಿದ್ದು, ಜೂನ್ 15ರಂದು ಅನುಮತಿ ದೊರಕಲಿದೆ. ತಲಾ 25 ಲಕ್ಷ ರೂ.ಮೂಲಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.