ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕಾರ್ಯಾರಂಭ

2
Published on

ಮೈಸೂರು: ಕೊನೆಗೂ ಮೈಸೂರು ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಕೋಲ್ಡ್ ಸ್ಟೋರೇಜ್ ಘಟಕ ಆರಂಭಿಸಲು ಬಜೆಟ್‌ನಲ್ಲಿ ಪ್ರಸ್ತಾಪವಾಗಿತ್ತಾದರೂ ನಿರ್ಮಾಣಕ್ಕೆ ಕಾಲ ಕೂಡಿ ಬಂದಿರಲಿಲ್ಲ.

ಈ ಹಿಂದೆಯೂ ಎಪಿಎಂಸಿಯ ಹೂವು ಮಳಿಗೆಗಳಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಮಾಡಲು ಪ್ರಸ್ತಾಪವಾಗಿತ್ತಾದರೂ ಅದು ಕಾರ್ಯಗತವಾಗಿರಲಿಲ್ಲ. ಈಗ ಬಂಡಿಪಾಳ್ಯದಲ್ಲಿ ಇರುವ ಎಪಿಎಂಸಿ ಆವರಣದಲ್ಲಿ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಾದ ಆರ್‌ಐಡಿಎಫ್-30 ಅಡಿಯಲ್ಲಿ ಕೋಲ್ಡ್ ಸ್ಟೋರೇಜ್‌ಗೆ ಅನುದಾನ ನೀಡಲಾಗಿದ್ದು, ಸುಮಾರು 13 ಕೋಟಿ ರೂ.ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ನಿರ್ಮಾಣ ಕಾರ್ಯದ ಗುತ್ತಿಗೆ ವಹಿಸಿಕೊಂಡಿರುವವರಿಗೆ 11 ತಿಂಗಳ ಗಡುವು ನೀಡಲಾಗಿದ್ದು, ಮುಗಿದ ನಂತರ ಘಟಕವನ್ನು ಎಪಿಎಂಸಿಗೆ ಹಸ್ತಾಂತರ ಮಾಡಬೇಕಾಗಿದೆ.

ಎಪಿಎಂಸಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಎರೆಹುಳ ಗೊಬ್ಬರ ತಯಾರಿಕೆ ಘಟಕ ಸ್ಥಾಪನೆ ಮಾಡಲು ಉದ್ದೇಶಿಸಲಾಗಿರುವ ಬಯೋಗ್ಯಾಸ್ ಘಟಕದ ಬಳಿಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಒಂದು ಎಕರೆ ಜಾಗವನ್ನು ಮೀಸಲಿಡಲಾಗಿದೆ.

ಇಲ್ಲಿ ಪ್ರಸ್ತುತ ಘಟಕ ಸ್ಥಾಪನೆಗೆ ಅಗತ್ಯವಾದ ತಳಪಾಯ ನಿರ್ಮಾಣ ಕಾಮಗಾರಿ ಶುರುವಾಗಿದೆ. ಯಂತ್ರಗಳನ್ನು ಬಳಕೆ ಮಾಡಿಕೊಂಡು ಭೂಮಿ ಸಮತಟ್ಟು ಮಾಡುವ ಕೆಲಸ ಹಾಗೂ ತಳಪಾಯಕ್ಕಾಗಿ ಗುಂಡಿಯನ್ನು ಅಗೆಯುವ ಕೆಲಸ ನಡೆಯುತ್ತಿದೆ.

ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತನ್ನು ಒಳಗೊಂಡಿರುವ ಈ ಘಟಕವು 3,750 ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹೊಂದಿದೆ. ಅಧುನಿಕತೆಗೆ ತಕ್ಕಂತೆ ಬಹು ಉಪಯೋಗಿ ಮಾದರಿಯಾಗಿದ್ದು, ಇದರಲ್ಲಿ ದವಸ-ಧಾನ್ಯ, ತರಕಾರಿಯಲ್ಲದೇ ಹುಣಸೆಹಣ್ಣಿನಂತಹ ಪದಾರ್ಥಗಳನ್ನು ಸಂಗ್ರಹಿಸಿ ಇಡಬಹುದಾದ ತಂತ್ರಜ್ಞಾನವನ್ನು ಒಳಗೊಂಡಿದೆ.

ರೈತರು, ವ್ಯಾಪಾರಿಗಳಿಗೆ ಅನುಕೂಲ:

ಬಹುದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣವನ್ನು ಹೊಂದಿರುವ ಬಂಡಿಪಾಳ್ಯ ಎಪಿಎಂಸಿಗೆ ದಕ್ಷಿಣ ಭಾಗದ ಜಿಲ್ಲೆಗಳಲ್ಲದೇ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ವ್ಯಾಪಾರ-ವಹಿವಾಟಿಗೆ ವ್ಯಾಪಾರಿಗಳು ಬರುತ್ತಾರೆ.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಿತ್ಯ 250ರಿಂದ 300 ಟನ್ ಆಹಾರ ಪದಾರ್ಥಗಳು ಬಿಕರಿಯಾಗುತ್ತವೆ. ಋತುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥ, ದಿನಸಿ ಪದಾರ್ಥ ಮಾರುಕಟ್ಟೆಗೆ ಹರಿದು ಬರುತ್ತದೆ. ಈ ಪದಾರ್ಥಗಳಲ್ಲಿ ಮಾರಾಟವಾಗದೇ ಇರುವ ಪ್ರಮಾಣವನ್ನು ಶೈತ್ಯಾಗಾರದಲ್ಲಿ ಶೇಖರಣೆ ಮಾಡಿ, ಬಳಿಕ ಮಾರಾಟ ಮಾಡಲು ಅನುಕೂಲವಾಗುತ್ತದೆ.

ಆಯಾಯ ಋತುಮಾನಕ್ಕೆ ಅನುಸಾರವಾಗಿ ಬೆಳೆದ ಬೆಳೆಗಳನ್ನು ರೈತರು ಮಾರಾಟ ಮಾಡಲು ತರುತ್ತಾರೆ. ಸೂರ್ಯಕಾಂತಿ ಸೇರಿದಂತೆ ವಾಣಿಜ್ಯ ಬೆಳೆಗಳು, ದ್ವಿದಳ ಧಾನ್ಯಗಳೂ ಮಾರಾಟವಾಗುತ್ತವೆ. ಇದರೊಂದಿಗೆ ನಿತ್ಯ ತರಕಾರಿ ವ್ಯಾಪಾರವೂ ನಡೆಯುತ್ತಿದೆ. ಬೇರೆ ಜಿಲ್ಲೆಗಳಿಂದಲೂ ಇಲ್ಲಿಗೆ ತರಕಾರಿಯನ್ನು ತಂದು ಮಾರಾಟ ಮಾಡುವ ರೈತರು ಗಣನೀಯವಾಗಿ ಇದ್ದಾರೆ.

ಹೀಗಾಗಿ ರೈತರು ತಂದ ಪದಾರ್ಥಗಳಿಗೆ ಸರಿಯಾದ ಬೆಲೆ ದೊರೆಯದೆ ಇದ್ದ ಸಂದರ್ಭದಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿ ಇಟ್ಟು, ದರ ಸಮರ್ಪಕವಾಗಿ ದೊರೆತಾಗ ಮಾರಾಟ ಮಾಡಲು ಈ ಘಟಕ ಅನುಕೂವಾಗಲಿದೆ.

ಜತೆಗೆ ಪದಾರ್ಥಗಳ ಖರೀದಿದಾರರೂ ಹೆಚ್ಚಿನ ಮಟ್ಟದಲ್ಲಿ ಖರೀದಿ ಮಾಡಿರುತ್ತಾರೆ. ಅವುಗಳನ್ನು ಸಾಗಣೆ ಮಾಡಲು ಸಮಯಬೇಕಾಗಿರುವುದರಿಂದ ಘಟಕದಲ್ಲಿ ಶೇಖರಣೆ ಮಾಡಿ ಬಳಿಕ ಬೇಕಾದಾಗ ತೆಗೆದುಕೊಂಡು ಹೋಗಲು ಅವಕಾಶ ದೊರೆಯುತ್ತದೆ.

ಸಾಂಬಾರ್ ಈರುಳ್ಳಿ, ಟೊಮ್ಯಾಟೊ ಬೇಗನೆ ಕೊಳೆಯುವ ಪದಾರ್ಥಗಳಾಗಿವೆ. ಯಾವಾಗ ದರ ಹೆಚ್ಚಳವಾಗುತ್ತದೆ, ಯಾವಾಗ ಕಡಿಮೆ ಆಗುತ್ತದೆ ಎನ್ನುವುದು ಮಾರುಕಟ್ಟೆಯ ವಿಶ್ಲೇಷಕರಿಗೆ ತಿಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ರೈತರು ಕೋಪಗೊಂಡು ಸಿಕ್ಕಿದ ಕಡೆಯಲ್ಲಿ ಲೋಡುಗಟ್ಟಲೆ ಟೊಮ್ಯಾಟೊ, ಈರುಳ್ಳಿಯನ್ನು ಸುರಿದು ಆಕ್ರೋಶ ವ್ಯಕ್ತಪಡಿಸುವುದು ಇದೆ. ಆದ್ದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಯು ಉಪಯುಕ್ತವಾಗಲಿದೆ. ಉತ್ತಮ ಸೌಲಭ್ಯ ಸಿಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಜಿಲ್ಲೆಗಳಿಂದಲೂ ರೈತರು ಇಲ್ಲಿಗೆ ಬಂದು ಮಾರಾಟ ಮಾಡಲು ಮುಂದಾಗುತ್ತಾರೆ.

ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿರುವ ಕೋಲ್ಡ್ ಸ್ಟೋರೇಜ್ ಘಟಕದಿಂದ ರೈತರು ಹಾಗೂ ವ್ಯಾಪಾರ ಮಾಡುವವರಿಗೂ ಅನುಕೂಲವಾಗುತ್ತದೆ. ತರಕಾರಿ ಪದಾರ್ಥಗಳನ್ನು ಶೇಖರಣೆ ಮಾಡಬಹುದು. ಕೊಳ್ಳುವವರು ಇಲ್ಲಿ ಇಟ್ಟು ತಮಗೆ ಬೇಕಾದಾಗ ತೆಗೆದುಕೊಂಡು ಹೋಗಬಹುದು ಅಥವಾ ಮಾರಾಟ ಮಾಡಬಹುದು. ಇದರಿಂದ ಹಣ್ಣು, ತರಕಾರಿ ಬೇಗ ಕೆಡುವುದಿಲ್ಲ. ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲವಾಗುತ್ತದೆ.

ಕುಮಾರಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ, ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net