

ಹೊನ್ನಾಳಿ: ಶಾಲೆ ಪ್ರಾರಂಭೋತ್ಸವಕ್ಕೂ ಮೊದಲು ತಾಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಶಾಲಾ ಕೊಠಡಿ, ಮೈದಾನ, ಅಡುಗೆ ಕೋಣೆಗಳನ್ನು ಸ್ವಚ್ಛ ಮಾಡಲಾಗಿದೆ. ಇಂದು ಆರಂಭವಾಗುವ ವಿದ್ಯಾಕೇಂದ್ರವನ್ನು ಸಿಂಗರಿಸಿ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತ ಮಾಡಲು ಶಾಲಾ ಶಿಕ್ಷಕರು ಸನ್ನದ್ಧರಾಗಿದ್ದಾರೆ. ಜತೆಗೆ ವಿದ್ಯಾರ್ಥಿಗಳಿಗೆ ಸಿಹಿ, ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.
22,000 ವಿದ್ಯಾರ್ಥಿಗಳಿಗೆ ಒಂದು ತಿಂಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ ಎಂದು ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ತಿಳಿಸಿದ್ದಾರೆ.
ಈಗಾಗಲೇ ಶೇ.80 ರಷ್ಟು ಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಶಾಲೆಯ ದಿನಚರಿ ಡೈರಿ ಹಾಗೂ ಕೆಲವು ಉರ್ದು ಪುಸ್ತಕಗಳು ಮಾತ್ರ ಇಲಾಖೆಯಿಂದ ಬರಬೇಕಿದೆ.
ಎಲ್ಲ ಸರ್ಕಾರಿ ಶಾಲೆಯ 18,500 ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ಇನ್ನೂ ನೀಡಿಲ್ಲ. ಪ್ರತಿ ತಾಲೂಕಿಗೂ ಹಂತಹಂತವಾಗಿ ಕೊಡುತ್ತಿದ್ದಾರೆ. ನ್ಯಾಮತಿ- ಹೊನ್ನಾಳಿ ತಾಲೂಕಿಗೂ ಇನ್ನೊಂದು ವಾರದಲ್ಲಿ ಸಮವಸ್ತ್ರಗಳನ್ನು ಬರಲಿದ್ದು, ನಂತರ ನೀಡಲಾಗುವುದು ಎಂದು ತಾಲೂಕು ಶಿಕ್ಷಣ ಸಂಯೋಜಕ ಆರ್.ಜೆ. ಅಪ್ಸರ್ ಆಹ್ಮದ್ ಹೇಳಿದ್ದಾರೆ.
ಪ್ರಾಥಮಿಕ ಶಾಲೆಗಳಲ್ಲಿ 114 ಶಿಕ್ಷಕ ಹುದ್ದೆ ಖಾಲಿಯಿದ್ದು, 99 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಡಿಡಿಪಿಐ ಆದೇಶ ನೀಡಿದ್ದಾರೆ. ಈ ಆದೇಶದನ್ವಯ ನೇಮಕ ಮಾಡಿಕೊಳ್ಳುತ್ತೇವೆ ಎಂದು ಬಿಇಒ ನಿಂಗಪ್ಪ ತಿಳಿಸಿದ್ದಾರೆ.