

ಮಂಡ್ಯ: ನಗರದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಬೆಲ್ಲದಾರತಿ’ ಯನ್ನು ಆ.24 ರಂದು ಮಧ್ಯಾಹ್ನ 3 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ. ನುಡಿಜಾತ್ರೆ ಅಂಗವಾಗಿ ಹೊರತರಲಾಗಿರುವ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜನರ ಮನಸ್ಸಿನಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಆಯೋಜಿಸಬೇಕು ಎಂದರು.
ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯಕ್ಕೆ ಶ್ರೀಮಂತ ಪರಂಪರೆ ಇದೆ. ಕನ್ನಡದ ಐಕ್ಯತೆಯ ಧ್ಯೋತಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂರು ದಿನ ಜಿಲ್ಲೆಯಲ್ಲಿ ಆಚರಿಸಲಾಗಿದೆ. ಕಾರ್ಯಕ್ರಮಗಳನ್ನು ಹಿಡಿದಿಡುವ, ದಾಖಲಿಸುವ ಹಾಗೂ ಮುಂದಿನ ಪೀಳಿಗೆಗೆ ಅದರ ನೆನಪುಗಳನ್ನು ಮೆಲಕು ಹಾಕುವ ದೃಷ್ಠಿಯಿಂದ ಸ್ಮರಣ ಸಂಚಿಕೆಯನ್ನು ಹೊರತರಲಾಗಿದೆ. ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರು, ಸಮ್ಮೇಳನದ ಅಧ್ಯಕ್ಷರು, ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ವಿವಿಧ ಸಮಿತಿಗಳ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಬೆಲ್ಲದಾರತಿ ಸ್ಮರಣ ಸಂಚಿಕೆಯ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಲು ಸ್ಮರಣ ಸಂಚಿಕೆ ಸಮಿತಿ ಅವರು ಸಭೆ ನಡೆಸಿ ಉತ್ತಮ ಸಾಹಿತಿಯನ್ನು ಆಯ್ಕೆ ಮಾಡುವಂತೆ ತಿಳಿಸಿದರು.
ಬೆಲ್ಲದಾರತಿ ಸ್ಮರಣ ಸಂಚಿಕೆಯನ್ನು 2000 ಪ್ರತಿ ಮುದ್ರಿಸಲಾಗಿದ್ದು, ಅದರಲ್ಲಿ 800 ಪ್ರತಿಯನ್ನು ಪಟ್ಟಿ ಮಾಡಿ ಗೌರವಪೂರ್ವಕವಾಗಿ ಉಚಿತವಾಗಿ ಸ್ವಾಗತ ಸಮಿತಿ ಸದಸ್ಯರು ಸೇರಿದಂತೆ ಗಣ್ಯರಿಗೆ ನೀಡಲಾಗುವುದು. ಕಾರ್ಯಕ್ರಮಕ್ಕೆ ವೇದಿಕೆಯನ್ನು ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಬೇಕು. ಸಂಪಾದಕೀಯ ಮಂಡಳಿಯವರನ್ನು ಗೌರವಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಕಾರ್ಯಕ್ರಮದಲ್ಲಿ ಕನ್ನಡ ನಾಡು ನುಡಿಯನ್ನು ಬಿಂಬಿಸುವ ರೀತಿ ವೇದಿಕೆ ಸಿದ್ಧವಾಗಬೇಕು. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಕನ್ನಡ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲೆಯ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಿಗೆ ಮಾಹಿತಿ ನೀಡಿ ಎಂದರು.
ಸಭೆಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಡಾ.ಚಿಕ್ಕಮರಳಿ ಬೋರೇಗೌಡ, ಎಂ.ವಿ.ಧರಣೇಂದ್ರಯ್ಯ, ಮೃತ್ಯುಂಜಯ, ಪ್ರದೀಪ್‌ಕುಮಾರ್ ಹೆಬ್ರಿ, ಮಾ.ರಾಮಕೃಷ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ, ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಇತರರಿದ್ದರು.