

ಮಂಡ್ಯ: ಕಳೆದ ವರ್ಷಾಂತ್ಯದಲ್ಲಿ ಅಭೂತಪೂರ್ವವಾಗಿ ನಡೆದಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಹೊರತಂದಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಸಂಚಿಕೆ’ಗೆ ಬೆಲ್ಲದ ಆರತಿ ಸಲ್ಲಿಸುವ ಮೂಲಕ ಅದ್ಭುತವಾಗಿ ಬಿಡುಗಡೆಗೊಳಿಸಲಾಯಿತು. ‘ಬೆಲ್ಲದಾರತಿ’ ಸಂಚಿಕೆ ಮಂಡ್ಯ ಜಿಲ್ಲೆಯ ಮಹತ್ವದ ದಾಖಲೆ. ಜಿಲ್ಲೆಯ ಸಾಂಸ್ಕೃತಿಕ ವಿಶ್ವ ರೂಪ ದರ್ಶನ, 1000ಕ್ಕಿಂತ ಹೆಚ್ಚಿನ ಪುಟ ಹೊಂದಿರುವ ಈ ಗ್ರಂಥ 132 ಲೇಖನ ಒಳಗೊಂಡಿದೆ. ಸಮ್ಮೇಳನಾಧ್ಯಕ್ಷರು, ಕರ್ನಾಟಕ ಭಾರತ, ವಿಶ್ವ, ಅಭಿವೃದ್ಧಿ ಭಾರತ ಮತ್ತು ಮಧುರ ಮಂಡ್ಯ ಎನ್ನುವ 5 ವಿಭಾಗವನ್ನು ಒಳಗೊಂಡಿದೆ.
ನುಡಿಜಾತ್ರೆ ಮುಗಿದ ಎಂಟು ತಿಂಗಳಾದರೂ ಸ್ಮರಣ ಸಂಚಿಕೆಗೆ ಬಿಡುಗಡೆಯಾಗುವ ಭಾಗ್ಯ ಸಿಕ್ಕಿರಲಿಲ್ಲ. ಈ ಬಗ್ಗೆ ಸಾಕಷ್ಟು ಒತ್ತಾಯ ಕೇಳಿಬರುತ್ತಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಜನ ಮೆಚ್ಚುವಂತೆ ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಸಮ್ಮೇಳನಕ್ಕೆಂದು ನೇಮಕಗೊಂಡಿದ್ದ ವಿಶೇಷಾಧಿಕಾರಿ ಚಂದ್ರಶೇಖರ್ ಅವರು ನೀಡಿದ ಶೀರ್ಷಿಕೆ ‘ಬೆಲ್ಲದಾರತಿ’ ಆಯ್ಕೆಯಾಗಿತ್ತು. ಅಂತೆಯೇ ಸ್ಮರಣ ಸಂಚಿಕೆ ಹೊರತರಲು ಶ್ರಮಿಸಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಡಾ.ಚಿಕ್ಕಮರಳಿ ಬೋರೇಗೌಡ, ಡಾ.ಮೀರಾ ಶಿವಲಿಂಗಯ್ಯ, ಮಾ. ರಾಮಕೃಷ್ಣ, ಜಿ.ಆರ್.ಚಂದ್ರಶೇಖರ್, ಕೋಮಲ್ ಕುಮಾರ್, ಕೃಷ್ಣಮೂರ್ತಿ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜನಪ್ರತಿನಿಧಿಗಳು ಸಮಾಜವನ್ನು ಸಾಮಾಜಿಕವಾಗಿ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಬದಲಾವಣೆ ತಂದರೆ, ಸಾಹಿತಿಗಳು ಸಮಾಜವನ್ನು ಒಳ್ಳೆ ಹಾಗೂ ಕೆಟ್ಟ ರೀತಿಯಲ್ಲೂ ಬದಲಾಯಿಸಬಹುದು. ಸಾಹಿತ್ಯದ ಮಹತ್ವ ದೊಡ್ಡದು. ಬರವಣಿಗೆಯಿಂದ ಸಮಾಜದ ಬದಲಾವಣೆ ಆಗುತ್ತದೆ. ಒಬ್ಬ ವ್ಯಕ್ತಿಯನ್ನು ಶಕ್ತಿಯಾಗಿ ಪರಿವರ್ತಿಸುವ ತಾಕತ್ತು ಸಾಹಿತ್ಯಕ್ಕಿದೆ. ಜಗತ್ತನ್ನು ಬ್ರಹ್ಮ ಸೃಷ್ಟಿಸಿದರೆ ಕಾವ್ಯವನ್ನು ಬ್ರಹ್ಮಾಂಡದ ರೀತಿ ಕವಿ ಸೃಷ್ಟಿಸುತ್ತಾನೆ. ಒಳ್ಳೆಯ ಅಥವಾ ಕೆಟ್ಟ ಸಮಾಜವನ್ನು ಸ್ಥಾಪಿಸುವ ಶಕ್ತಿ ಕವಿ ಬರವಣಿಗೆಯ ಮೇಲೆ ನಿಂತಿದೆ. ಅಂತಹ ಸಾಮರ್ಥ್ಯ ಸಾಹಿತಿ ಹಾಗೂ ಸಾಹಿತ್ಯಕ್ಕಿದೆ ಎಂದು ಹೇಳಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಇತರರಿದ್ದರು.
ಸಂಚಿಕೆ ಅಭಿಮಾನದ ಭಾಗ
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ, ಈ ಸಂಚಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿಮಾನ ಹಾಗೂ ಹೆಮ್ಮೆಯ ಭಾಗವಾಗಿದೆ. ಇದು ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿದೆ. ನಮ್ಮ ದೇಶವನ್ನೀಗ ನವಗ್ರಹಗಳು ಸುತುತ್ತಿವೆ. ಈ ನವಗ್ರಹಗಳು ಶಾಸ್ತ್ರ-ಪುರಾಣಗಳಲ್ಲಿ ಬರುವ ನವಗ್ರಹಗಳಲ್ಲ. ಆಧುನಿಕರೆನ್ನುವ ನಾವೇ ನಮ್ಮ ವಿಕೃತ ಮನಸ್ಸುಗಳಿಂದ ಸೃಷ್ಟಿಸಿರುವ ನವಗ್ರಹಗಳು. ಅವೆಂದರೆ, ವ್ಯಕ್ತಿಚಾರಿತ್ರ್ಯದ ದಾರಿದ್ರ್ಯ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ದಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅನಾಯಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ ಎಂದರು.
ಈ ಅನಿಷ್ಟ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹಿಷ್ಣುತೆ, ಭಯೋತ್ಪಾದನೆ, ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಗುಣಗಳೆಲ್ಲ ತುಂಬಿಕೊಂಡು ಬಿಟ್ಟಿವೆ. ಇದೆ ನೆಮ್ಮದಿ ಎನ್ನುವುದು ಬರಿಯ ಭ್ರಮೆಯಾಗಿದೆ. ಇದರಿಂದ ನಾವು ಹೊರಬರಬೇಕಿದೆ. ಸಮ್ಮೇಳನ ನಡೆದು ಎಂಟು ತಿಂಗಳಾಗಿದೆ. ಅಂದಿನ ಸಮ್ಮೇಳನ ಇತಿಹಾಸದಲ್ಲೇ ದಾಖಲೆಯಾಗಿದೆ. ಇದೀಗ ಸಂಚಿಕೆಯೂ ಬಿಡುಗಡೆಯಾಗಿದೆ. ಇದು ನನಗೆ ಒದಗಿದ ಮತ್ತೊಂದು ಪುಣ್ಯಾವಕಾಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಯೋಜಕರಿಗೆ ಮಾದರಿ
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪುಣ್ಯದ ವಿಷಯ. ಮಂಡ್ಯ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯದ್ಭುತವಾಗಿ ಮೂಡಿಬಂದಿದೆ. ಇಲ್ಲಿ ನಡೆದ ಸಮ್ಮೇಳನದಲ್ಲಿ ಸೇರಿದ ಕನ್ನಡಾಸ್ತರು ಮುಂದೆ ನಡೆಯುವ ಸಮ್ಮೇಳನ ಆಯೋಜಕರಿಗೆ ಮಾದರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಪೂರ್ವಸಿದ್ಧತೆಗಳು ಅತ್ಯವಶ್ಯಕವಾಗಿರುತ್ತದೆ. ಕನ್ನಡಕ್ಕಾಗಿ ಓಟ ಸಂಘಟಿಸಿದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ಸಂಘಟಿಸಲು ಸಹಕರಿಸಿದ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶ್ಲಾಸಿದರು.
ಸಮ್ಮೇಳನದ ಸವಿನೆನಪಿನಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಸಾಹಿತ್ಯ ಸಮ್ಮೇಳನದ ಉಳಿತಾಯ ಹಣ 2.20 ಕೋಟಿ ರೂ ಮೀಸಲಿಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಆಕರ್ಷಕವಾಗಿ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಶಾಸಕರ ಅನುದಾನದಡಿ ಶಾಸಕರಾದ ದಿನೇಶ್‌ಗೂಳಿಗೌಡ, ರಮೇಶ ಬಂಡಿಸಿದ್ದೇಗೌಡ ಹಾಗೂ ರವಿಕುಮಾರ ಗಣಿಗ ತಲಾ ಒಂದು ಕೋಟಿ ರೂ ಅನುದಾನ ಕೊಡಲು ಒಪ್ಪಿರುತ್ತಾರೆ. ಒಟ್ಟಾರೆ 5 ಕೋಟಿ ರೂ ಅನುದಾನದಲ್ಲಿ ಅತ್ಯಾಕರ್ಷಕವಾಗಿ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ೋಷಿಸಿದರು.