

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ 80 ಲೇಖನ ಸಮಿತಿಗೆ ತಲುಪಿದೆ. ಇವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ವಿಷಯ ಕುರಿತು 110 ಲೇಖನಗಳಿಗೆ ಆಹ್ವಾನ ಮಾಡಲಾಗಿತ್ತು. ಇದರಲ್ಲಿ ಈವರೆಗೆ 80 ಬಂದಿದೆ. ಸ್ಮರಣ ಸಂಚಿಕೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಸಂದರ್ಶನವನ್ನು ಸೇರಿಸಿಕೊಳ್ಳಬೇಕಿದೆ. ಸಮ್ಮೇಳನದ ಮಹಾಪೋಷಕ ಅದಿಚುಂಚನಗಿರಿಯ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಿಎಂ, ಸಚಿವರು, ಶಾಸಕರ ಸಂದೇಶ ಅಥವಾ ನುಡಿಗಳನ್ನು ಸಂಗ್ರಹಿಸುವ ಕೆಲಸವನ್ನು ಸಮಿತಿಯ ಸದಸ್ಯರು ಹಂಚಿಕೊಂಡು ಕೆಲಸ ನಿರ್ವಹಿಸಬೇಕು ಎಂದರು.
ಸ್ಮರಣ ಸಂಚಿಕೆಗೆ ಶೀರ್ಷಿಕೆ ಕುರಿತು ಅರ್ಜಿ ಆಹ್ವಾನಿಸಲಾಗಿತ್ತು. 19 ಪತ್ರಗಳಲ್ಲಿ ಸುಮಾರು ಶೀರ್ಷಿಕೆಗಳು ಬಂದಿದ್ದು, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಹಂಚಿಕೊಂಡು ಶೀರ್ಷಿಕೆಯನ್ನು ಅಂತಿಮಗೊಳಿಸುವಂತೆ ಸಮಿತಿ ತೀರ್ಮಾನಿಸಲಾಗಿದೆ. ಸಮಿತಿಯಿಂದ 2000 ಸ್ಮರಣ ಸಂಚಿಕೆ ಮುದ್ರಿಸಲು ಅನುಮತಿ ಇದೆ. ಈ ಸಮಿತಿ ನಿರಂತರವಾಗಿ ನಡೆಯಲಿದ್ದು, ಸ್ಮರಣ ಸಂಚಿಕೆಯನ್ನು ಕೆಲವು ದೊಡ್ಡ ಸಂಸ್ಥೆಗಳಿಂದ ಪ್ರಾಯೋಜಕತ್ವ ಪಡೆದು ಬೇಕಾದ ಸಂದರ್ಭದಲ್ಲಿ ಸಂಚಿಕೆ ಮುದ್ರಣ ಮಾಡಿ ಒದಗಿಸಬೇಕು. ಇದರಿಂದ ಸಮಿತಿ ಮಾಡುವ ಕೆಲಸ ನಿರಂತರವಾಗಿ ಉಳಿಯುತ್ತದೆ. ಮುಖಪುಟದ ವಿನ್ಯಾಸನ್ನು ಶೀರ್ಷಿಕೆಯನ್ನು ಅಂತಿಮಗೊಳಿಸಿದ ನಂತರ ಮಾಡುವುದು ಸೂಕ್ತ. ವಿನ್ಯಾಸವು ಓದುಗರ ಮನಸ್ಸಿನಲ್ಲಿ ನೆಲೆ ಮಾಡುವ ರೀತಿ ಇರಬೇಕು. ಈ ಹಿನ್ನಲೆಯಲ್ಲಿ ವಿನ್ಯಾಸವು ಉತ್ತಮವಾಗಿ ಮೂಡಿಬರುವಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ, ಸಾಹಿತಿ ಡಾ.ಮ.ರಾಮಕೃಷ್ಣ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಹರ್ಷ ವಿ ಪಣ್ಣೆದೊಡ್ಡಿ, ಡಾ.ಕೃಷ್ಣೇಗೌಡ ಹುಸ್ಕೂರು ಇತರರಿದ್ದರು.