

ವಿಜಯವಾಣಿ ಸುದ್ದಿಜಾಲ ಉಡುಪಿ
ತುಳು ಚಳವಳಿ ಕನ್ನಡದ ವಿರುದ್ಧ ಅಲ್ಲ. ಅದು ತುಳುನಾಡ ಜನರ ಆತ್ಮ ನಿರ್ಭರ ಚಳವಳಿ ಎಂದು ಎಸ್.ಯು.ಪಣಿಯಾಡಿ ಅವರು ಸೆ.23, 1928ರಲ್ಲಿ ತುಳುವ ಮಹಾಸಭೆ ಸ್ಥಾಪನೆ ಸಂದರ್ಭ ಹೇಳಿದ್ದರು. ನಾವು ಕೂಡ ಅದೇ ಉದ್ದೇಶದಿಂದ ಕಾರ್ಯಪ್ರವೃತ್ತರಾದರೆ ತುಳುವರ ಸ್ವಾಭಿಮಾನ ಉಳಿಸಿ, ಬೆಳೆಸಬಹುದು ಎಂದು ಮುರಳೀಧರ ಉಪಾಧ್ಯ ಹಿರಿಯಡ್ಕ ಅಭಿಪ್ರಾಯಪಟ್ಟರು.
ಉಡುಪಿಯಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ತುಳುವ ಚಳವಳಿಯ ಹರಿಕಾರ ಎಸ್.ಯು.ಪಣಿಯಾಡಿ, ಪೊಳಲಿ ಸೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ ಮೊದಲಾದವರು ಪ್ರಾರಂಭಿಸಿದ ತುಳುವ ಮಹಾಸಭೆಯ 96ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ ಮಾತನಾಡಿ, ತುಳುವರ್ಲ್ಡ್ ಫೌಂಡೇಷನ್ ಮಂಗಳೂರು ಕಾರ್ಯಕ್ರಮ ಆಯೋಜಿಸಿದ್ದು ತುಳುವ ಮಹಾಸಭೆಯ ಎಲ್ಲ ಧ್ಯೇಯೋದ್ದೇಶ ಈಡೇರಿಸುವ ಸಲುವಾಗಿ ಕಾರ್ಯ ಪ್ರವೃತ್ತವಾಗಲಿದೆ. ಅಲ್ಲದೆ, ಪ್ರಾದೇಶಿಕವಾಗಿ ಅಲ್ಲಲ್ಲಿ ತುಳುವ ಮಹಾಸಭೆಯ ಪರಸ್ಪರ ಸಹಾಯ ಗುಂಪುಗಳನ್ನು ಮಾಡಲು ಉದ್ದೇಶಿಸಲಾಗಿದೆ ಎಂದರು.
ತುಳುವ ಮಹಾಸಭೆ ಪ್ರಥಮ ಸದಸ್ಯತ್ವವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಅವರು ಹಿರಿಯ ತುಳು ಹೋರಾಟಗಾರ ಸಾಂಗ್ಲಿ ದಿವಾಕರ್ ಶೆಟ್ಟಿ ಅವರಿಗೆ ನೀಡಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಈಶ್ವರ್ ಚಿತ್ಪಾಡಿ, ಗಂಗಾಧರ್ ಕಿದಿಯೂರು, ಎಸ್.ಎ.ಕೃಷ್ಣಯ್ಯ ಮೊದಲಾದವರು ಸದಸ್ಯತ್ವ ಸ್ವೀಕರಿಸಿ ಸಲಹೆ ಮಾರ್ಗದರ್ಶನ ನೀಡಿದರು.
ತುಳುವರ್ಲ್ಡ್ ಫೌಂಡೇಷನ್ ಉಪಾಧ್ಯಕ್ಷೆ ತಾರಾ ಆಚಾರ್ಯ ಮತ್ತು ಸದಸ್ಯೆ ಯಶೋದಾ ಕೇಶವ್ ಅವರು ಮುರಳಿ ಉಪ್ಪಂಗಳ, ಗಿರೀಶ್ ಶೆಟ್ಟಿ, ರಾಮಕೃಷ್ಣ ಕೆ.ಎಂ., ಹೇಮಲತಾ ವರ್ಕಾಡಿ, ಸೌಕೇಶ್ ವಿ.ಎಸ್.ಕಟಪಾಡಿ, ಸಾಗರ್ ಎಸ್.ಭಂಡಾರಿ, ವತ್ಸಲಾ ಕೋಟ್ಯಾನ್, ಮಮತಾ ಎಸ್.ಶೆಟ್ಟಿ, ಸರೋಜಾ ಆರ್.ಶೆಣೈ, ಜ್ಯೋತಿ ಎಸ್.ದೇವಾಡಿಗ, ಸುಶೀಲಾ ಜಯಕರ, ಉಷಾ, ದಯಾಶಿನಿ, ತಾರಾ ಸತೀಶ್, ದಯಾನಂದ ಕಿದಿಯೂರು, ಸುಮಿತ್ರಾ ಕೆರೆಮಠ ಮೊದಲಾದವರಿಗೆ ತುಳುವ ಮಹಾಸಭೆಯ ಸದಸ್ಯತ್ವ ನೀಡಿ ವಂದಿಸಿದರು.
ತುಳುವ ಮಹಾಸಭೆ ಶತಮಾನೋತ್ಸವದ ವೇಳೆ 2028ರ ಸಂದರ್ಭದಲ್ಲಿ ಉಡುಪಿಯಲ್ಲಿ ವಿಶ್ವಮಟ್ಟದಲ್ಲಿ ತುಳುವ ಮಹಾಸಭೆ ಆಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಈಗಲೇ ಕಾರ್ಯಪ್ರವೃತ್ತರಾಗಬೇಕು.-ಡಾ.ರಾಜೇಶ್ ಆಳ್ವ ನಿರ್ದೇಶಕ, ತುಳು ವರ್ಲ್ಡ್ ಫೌಂಡೇಷನ್