

ಭರಮಸಾಗರ: ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಕಾರ್ಯಕ್ರಮ ಬುಧವಾರ ಆರಂಭವಾಯಿತು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬಳಿಕ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.
ತರಳಬಾಳು ಜಗದ್ಗುರು ಬೃಹನ್ಮಠ, ದಾವಣಗೆರೆಯ ಎಸ್‌ಎಸ್ ಹೈಟೆಕ್ ಆಸ್ಪತ್ರೆ, ಸಿರಿಗೆರೆಯ ಎಂಬಿಆರ್ ಕಾಲೇಜ್ ಎನ್ನೆಸ್ಸೆಸ್ ಘಟಕ, ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಆರೋಗ್ಯ ಶಿಬಿರ ನಡೆಯಿತು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವಲಯ ಮಟ್ಟದಲ್ಲಿ ವಚನ, ಜಾನಪದ ನೃತ್ಯ, ಕಿರು ನಾಟಕ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಸ್ಥಾನ ಪಡೆದಿದ್ದ ತಂಡದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ.ವಾಮದೇವಪ್ಪ ಇತರರಿದ್ದರು.
ದಾಸೋಹಕ್ಕೆ ದೇಣಿಗೆ: ಕಾರ್ಯಕ್ರಮದ ದಾಸೋಹಕ್ಕೆ ಬುಧವಾರವೂ ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ತೆಂಗಿನಕಾಯಿ ಇನ್ನು ಮುಂತಾದ ದಾಸೋಹ ಸಾಮಗ್ರಿಗಳನ್ನು ಭಕ್ತರು ಮಠಕ್ಕೆ ಸಮರ್ಪಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿ ಕುಲಪತಿ ಬಿ.ಡಿ.ಕುಂಬಾರ್ ಮಾತನಾಡಿ, ಹಿರಿಯ ಗುರುಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ರಾಂತಿ ಮಾಡಿದ ಮಹಾಪುರುಷ ಎಂದು ಬಣ್ಣಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಧ್ಯಕರ್ನಾಟಕದಲ್ಲಿ ಸರ್ಕಾರ ಮಾಡಬೇಕಾದ ಶೈಕ್ಷಣಿಕ ಅಭಿವೃದ್ಧಿ ಕಾರ್ಯವನ್ನು ಬಿಕ್ಷೆಯನ್ನು ಬೇಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದವರು ಲಿಂಗೈಕ್ಯ ಶ್ರೀಗಳು ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಶಿವಕುಮಾರ್ ಶಿವಾಚಾರ್ಯ ಸ್ವಾಮೀಜಿ ಸಮಾಜವನ್ನು ಕಾಯಕಯೋಗಿಗಳನ್ನಾಗಿ ಮಾಡಿದವರು. ಶಿಕ್ಷಣ ಮತ್ತು ದಾಸೋಹವನ್ನು ಜತೆಯಾಗಿ ಮಾಡಿದ ಸಂತ ಎಂದು ಹೇಳಿದರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ತರಳಬಾಳು ಮಠ ರೈತರಿಗೂ ಜ್ಞಾನ ದಾಸೋಹ ನೀಡಿದೆ. ಗುರುಗಳ ಪಾದಸ್ಪರ್ಶ, ದೂರದೃಷ್ಟಿಯಿಂದ ನೀರಾವರಿ ಸೌಲಭ್ಯ ಅನೇಕ ಹಳ್ಳಿಗಳಿಗೆ ದೊರೆತಿದೆ ಎಂದರು.
ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ತೆರೆದು ಬಡ ಮಕ್ಕಳಿಗೆ ಶಿಕ್ಷಣ ನೀಡಿದ ಕಾರ್ಯ ಮಹತ್ತರ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮಾತನಾಡಿ, ಮಕ್ಕಳಲ್ಲಿ ಜ್ಞಾನ, ಶಿಸ್ತು, ಸಂಯಮ ಬಿತ್ತುವ ಕಾರ್ಯದಲ್ಲಿ ಮಠ ತೊಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮಗೆ ಹೆಮ್ಮೆ: ಮಕ್ಕಳು ಶುದ್ಧ, ಧೈರ್ಯದಿಂದ ಮಾತನಾಡುವುದನ್ನು ಕಲಿಯಬೇಕು. ಮಾತೃಭಾಷೆಯನ್ನು ಪ್ರೀತಿಸಬೇಕು. ಚಂದ್ರಯಾನ 3ರಲ್ಲಿ ನಮ್ಮ ಸಂಸ್ಥೆಯಲ್ಲಿ ಓದಿದವರು ಇದ್ದಾರೆ ಎಂಬುದು ನಮಗೆ ಹೆಮ್ಮೆ.-ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ