ಸಂಗೀತ ಲೋಕದ ಮಾಂತ್ರಿಕ ಪಂ. ರಾಜೀವ್ ತಾರಾನಾಥ್

18 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಂ. ರಾಜೀವ್ ತಾರಾನಾಥ್ ವಿಶ್ವ ಕಂಡ ಒಬ್ಬ ಸರ್ವಶ್ರೇಷ್ಠ ಸರೋದ್ ವಾದಕರು. ಅಷ್ಟೆ ಅಲ್ಲ, ಸಂಗೀತ ಲೋಕದ ಮಾಂತ್ರಿಕರಾಗಿದ್ದರು. ಅವರು ಬಹುತ್ವ ಭಾರತದ ಭವ್ಯ ಕನಸುಗಾರರಾಗಿದ್ದರು ಎಂದು ಹೊಸಪೇಟೆಯ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶನಿವಾರ ಆಯೋಜಿಸಿದ್ದ ಪಂ. ರಾಜೀವ್ ತಾರಾನಾಥ ಅವರ 93ನೇ ಜನ್ಮದಿನ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜೀವ್ ತಾರಾನಾಥರು ಜಾತಿ, ಧರ್ಮ, ಗಡಿ, ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್ ದಾರ್ಶನಿಕರು. ಸೂಫಿ ಪಂಥದ ಪ್ರತಿಪಾದರು ಬೋಽಸಿದ ಬಹುತ್ವದ ಕಲ್ಪನೆಯಂತೆ ನಾನು ಎನ್ನದೆ ನಾವು ಎಂಬ ಭಾವನೆಯ ಸಾಮರಸ್ಯದ ಸಹಬಾಳ್ವೆಯ ಚಿಂತನೆ ಒಳಗೊಂಡ ಬಹುತ್ವ ಗುಣ ಇಷ್ಟಪಟ್ಟವರಾಗಿದ್ದರು. ಅವರಲ್ಲಿ ಅಪಾರ ಪ್ರಯೋಗಶೀಲ ಗುಣವಿತ್ತು. ಆಂಗ್ಲ ಭಾಷಾ ಪಂಡಿತರಾಗಿದ್ದ ಅವರು ಪ್ರಾಧ್ಯಾಪಕ ಹುದ್ದೆ ತೊರೆದು ಸಂಗೀತದ ಬಗ್ಗೆ ಆಸಕ್ತಿ ಹೊಂದಿದರು. ಖ್ಯಾತ ಸಂಗೀತಗಾರರಾದ ಅಲಿ ಅಕ್ಬರ್‌ಖಾನ್‌ರಿಂದ ಪ್ರಭಾವಿತರಾದ ರಾಜೀವ್ ತಾರಾನಾಥ, ಅವರೇ ನನ್ನ ಗುರು ಎಂದು ಒಪ್ಪಿಕೊಂಡು ಸಂಗೀತ ಪರಂಪರೆ ಮುಂದುವರಿಸಿದರು. ಹಲವಾರು ಭಾಷೆ ಬಲ್ಲ ಪ್ರಕಾಂಡ ಪಂಡಿತರಾಗಿದ್ದು. ಭಾರತದ ಇಂದಿನ ಸ್ಥಿತಿಗತಿಯ ಬಗ್ಗೆ ವಿಷಾದಿಸಿದ್ದರು ಎಂದರು.

ಧಾರವಾಡ ನಿರಂಜನ ವಿಚಾರ ವೇದಿಕೆಯ ಸಂಚಾಲಕ ಎಚ್.ಜಿ. ದೇಸಾಯಿ ಮಾತನಾಡಿ, ಪಂ. ರಾಜೀವ್ ತಾರಾನಾಥರು ಅಪರೂಪದ ಸಂಗೀತ ವಿದ್ವಾಂಸರು. ಅವರಿಗೆ ಸಂಗೀತದ ಬಳುವಳಿ ಮನೆಯಿಂದಲೇ ದೊರೆತಿತ್ತು ಎಂದರು.

ಮೈಸೂರಿನ ಖ್ಯಾತ ತಬಲಾ ವಾದಕ ಭೀಮಾಶಂಕರ ಬಿದನೂರ ಮಾತನಾಡಿ, ಪಂ. ರಾಜೀವ್ ತಾರಾನಾಥ ನನ್ನಂತಹ ಅನೇಕ ಸಂಗೀತ ಕಲಾವಿದರನ್ನು ಮಕ್ಕಳಂತೆ ಬೆಳೆಸಿ ಪ್ರೋತ್ಸಾಹಿಸಿದರು. ಅವರದು ಮೇರು ವ್ಯಕ್ತಿತ್ವ, ನಿಷ್ಠುರ ಗುಣವುಳ್ಳ ಉದಾರಿಗಳಾಗಿದ್ದರು. ನಾವು ಇಂದು ಗುರುಭಕ್ತಿ ಹೇಗೆಂಬುದನ್ನು ಅವರಿಂದಲೇ ಕಲಿಯಬೇಕು ಎಂದರು.

ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಪರಿಚಯಿಸಿದರು. ಕೆ. ರಾಮರಡ್ಡಿ ನಿರ್ವಹಿಸಿದರು. ಡಾ. ಸಿ.ಬಿ. ಐನಳ್ಳಿ ವಂದಿಸಿದರು.

ಬಸವಪ್ರಭು ಹೊಸಕೇರಿ, ಎಂ.ಡಿ. ಒಕ್ಕುಂದ, ಎಂ.ಎ0. ಚಿಕ್ಕಮಠ, ಚಂದ್ರಶೇಖರ ಅಮೀನಗಡ, ಎ.ಎಲ್. ದೇಸಾಯಿ ಹಾಗೂ ಸಂಗೀತಾಸಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net