ಮೈಸೂರಿನಲ್ಲಿ ಪಂಡಿತ್ ರಾಜೀವ ತಾರನಾಥ ಸ್ಮರಣೆ

Commemoration of Pandit Rajeev Taranath in Mysore
Published on

ಮೈಸೂರು: ಸಂಗೀತ ಸೇರಿದಂತೆ ಪ್ರತಿಯೊಂದು ಕಲೆಗಳು ಸುಮ್ಮನೆ ಒಲಿಯುವುದಿಲ್ಲ, ಅದಕ್ಕೆ ದೊಡ್ಡ ಪರಿಶ್ರಮ, ತ್ಯಾಗ್ಯದ ಅವಶ್ಯಕತೆ ಇದೆ. ಇದಕ್ಕೆ ಪಂಡಿತ್ ರಾಜೀವ ತಾರನಾಥ ದೊಡ್ಡ ಉದಾಹರಣೆ ಸಿತಾರ್ ವಾದಕಿ ಸಿ.ಎಸ್. ಸರ್ವಮಂಗಳಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋ ಜಿಸಿದ್ದ ಖ್ಯಾತ ಸರೋದ್ ವಾದಕ ದಿ. ಪಂ. ರಾಜೀವ ತಾರಾನಾಥ ನೆನಪಿನ ಕಾರ್ಯಕ್ರಮದಲ್ಲಿ ಗಣೇಶ ಅಮೀನಗಡ ಮತ್ತು ರಘುಪತಿ ರಾಮ್ಹನ್‌ಕರ್ ಸಂಪಾದನೆಯ ‘ಸರೋದ್ ಸ್ವರಯಾನ’ ಕೃತಿಯ ಮೂರನೇ ಮುದ್ರಣ ಬಿಡುಗಡೆ ಮಾಡಿ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲಿ ರಾಜೀವ ತಾರಾನಾಥ ಅವರು ಸರೋದ್ ಮಾರಾಟ ಮಾಡಿ ಉದ್ಯೋಗದ ಕಡೆ ಮುಖ ಮಾಡುವ ಮನಸ್ಸು ಮಾಡಿದ್ದರು. ಆದರೆ, ಸಂಕಷ್ಟದ ಸಂದರ್ಭದಲ್ಲೂ ಸಂಗೀತಯಾನ ಮುಂದುವರೆಸಿದರು. ಈ ಹಂತ ತಲುಪಲು ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದು ಸ್ಮರಿಸಿದರು.

ಸಂಗೀತದಲ್ಲಿ ಭಾವನೆಗಳ ಪಾತ್ರದ ಬಗ್ಗೆ ರಾಜೀವ ತಾರಾನಾಥ ಸದಾ ಒತ್ತಿ ಹೇಳುತ್ತಿದ್ದರು. ಸಂಗೀತ ಸುಮ್ಮನೆ ಸೃಷ್ಟಿಯಾಗುವುದಿಲ್ಲ, ಅದರ ಹಿಂದೆ ಒಂದು ಭಾವನೆ ಇದೆ. ಭಾವನೆ ಇಲ್ಲದೆ ಸಂಗೀತ ಇಲ್ಲ, ಸಂಗೀತದೊಂದಿಗೆ ಭಾವನೆ ಬೆರೆತು ಹೋಗಿದೆ ಎಂಬುದು ರಾಜೀವ ತಾರಾನಾಥ ಅವರ ಅಭಿಪ್ರಾಯವಾಗಿತ್ತು ಎಂದರು.

ರಾಜೀವ ತಾರಾನಾಥ ಸಂಗೀತವನ್ನು ಉಸಿರಾಗಿಸಿಕೊಂಡಿದ್ದರು. ಸಂಗೀತಕೋಸ್ಕರ ಬದುಕನ್ನು ಮುಡಿಪಾಗಿಟ್ಟಿದ್ದರು. ಸಂಗೀತವನ್ನು ಮುಂದಿನ ತಲೆಮಾರಿಗೆ ದಾಟಿಸಲು ಅವರು ಶ್ರಮಿಸಿದ್ದರು. ಅವರಂತಹ ಚಿಂತನಶೀಲ ಮನಸ್ಸು ಹೊಂದಿರುವ ಸಂಗೀತ ಕಲಾವಿದರು ಸಿಗುವುದು ಅಪರೂಪ. ಅವರನ್ನು ಕಳೆದುಕೊಡಿರುವುದು ಸಂಗೀತ ಲೋಕಕ್ಕೆ ಬಹುದೊಡ್ಡ ನಷ್ಟ ಎಂದು ಹೇಳಿದರು.

ಲೇಖಕ ಗಣೇಶ ಅಮೀನಗಡ ಮಾತನಾಡಿ, ಸಂಗೀತಕಾರರ ಮನೆಗೆ ಸಾಮಾನ್ಯವಾಗಿ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ, ರಾಜೀವ ತಾರಾನಾಥ ಮನೆಗೆ ಎಲ್ಲ ವರ್ಗದವರು ಭೇಟಿ ನೀಡುತ್ತಿದ್ದರು. ಅವರ ಮನೆಯಲ್ಲಿ ಎಲ್ಲ ವಿಷಯಗಳ ಕುರಿತು ಮುಕ್ತವಾಗಿ ಚರ್ಚೆ ನಡೆಯುತಿತ್ತು. 92ನೇ ವಯಸ್ಸಿನಲ್ಲೂ ಅವರು ಸಂಗೀತ ಅಭ್ಯಾಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ಕಪ್ಪಣ್ಣ, ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ವಿ. ಬೆಟ್ಟಕೋಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net