ರಾಜಮನೆತನಗಳಿಗೆ ನಾಲ್ವಡಿ ಆಡಳಿತ ಮಾದರಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬಣ್ಣನೆ

1 (2)
Published on

ಮಂಡ್ಯ: ದೇಶದಲ್ಲಿನ ರಾಜಮನೆತಗಳ ಅರಸರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಮಾದರಿ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಅಭಿಪ್ರಾಯಪಟ್ಟರು.

ನಗರದ ಪಿಇಎಸ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಟ್ರಸ್ಟ್‌ನಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಮೈಸೂರು ಪ್ರಾಂತ್ಯವನ್ನಾಳಿದ ಒಡೆಯರ್ ವಂಶದಲ್ಲಿ ನಾಲ್ವಡಿ ಅವರ ಆಡಳಿತದಲ್ಲಿ ಜನರಿಗೆ ಅಪಾರ ಕೊಡುಗೆ ನೀಡಿದೆ. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ ಮಹಾನ್ ನಾಯಕರು. ಅವರ ಆಡಳಿತವು ಸುವರ್ಣಾಕ್ಷರಗಳಿಂದ ಬರೆದಿಡಬೇಕು. ಮಂಡ್ಯ ಜಿಲ್ಲೆಯನ್ನು ಹಸಿರು ಮಾಡಲು ಪಟ್ಟ ಪಣಕ್ಕೆ ಜಿಲ್ಲೆಯ ಜನತೆ ಸದಾ ಚಿರಋಣಿಯಲ್ಲಿರುತ್ತೇವೆ ಎಂದು ಹೇಳಿದರು.

ಮಹಾತ್ಮ ಗಾಂಧಿಜೀ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ಮಹಾನ್ ವ್ಯಕ್ತಿಯನ್ನು ನಾವು ಪ್ರತಿದಿನವೂ ಸ್ಮರಿಸಬೇಕು. ಅವರು ನಿಧನರಾಗಿ ಹಲವು ದಶಕಗಳೇ ಕಳೆದರೂ ಜನರ ಮಾನಸಲ್ಲಿ ಉಳಿದಿದ್ದಾರೆ. ಅನ್ನದಾತರಾಗಿ ನೆಲೆಸಿದ್ದಾರೆ. ಶಿಕ್ಷಣ, ಉದ್ಯೋಗ, ಸಮಾಜ ಸುಧಾರಣೆ ಕಾರ್ಯಗಳು, ಅನಿಷ್ಠ ಪದ್ದತಿಗಳಿಗೆ ಹೊಸ ಕಾನೂನು ರೂಪಿಸಿ, ಮೀಸಲಾತಿ ನೀಡಿ ಶೋಚಿತ ಸಮುದಾಯಗಳಿಗೆ ಆಧ್ಯತೆ ನೀಡಿದ್ದು, ಕನ್ನಂಬಾಡಿ ಕಟ್ಟೆಕಟ್ಟಿ ನೀರು ಹರಿಸಿ, ಭತ್ತ-ರಾಗಿ, ಕಬ್ಬು ಬೆಳೆಯುವಂತೆ ಆರ್ಥಿಕ ಚೇತರಿಕೆಗೆ ನಾಂದಿಯಾಗಿದ್ದು, ಕಾರ್ಖಾನೆಗಳನ್ನು ನಿರ್ಮಿಸುವುದರ ಜತೆಗೆ ಬ್ಯಾಂಕ್, ವಿಶ್ವವಿದ್ಯಾನಿಲಯಗಳನ್ನು ಕಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತು ಉಪನ್ಯಾಸ ನೀಡಿದರು. ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹಾಲಿಂಗೇಗೌಡ, ನೆಲದನಿ ಬಳಗ ಅಧ್ಯಕ್ಷ ಮಂಗಲ ಲಂಕೇಶ್, ಮಂಜು, ತಗ್ಗಹಳ್ಳಿ ಲೋಕೇಶ್, ದೇವೇಗೌಡ, ದ.ಕೋ.ಚಂದ್ರಶೇಖರ್, ಸಂತೆಕಸಲಗೆರೆ ಜಗದೀಶ್, ಕುಮಾರ್‌ಗೌಡ, ಮಹಾದೇವ, ಸಚ್ಚಿನ್, ಅರಕೆರೆ ಸಿದ್ದರಾಜು ಇತರರಿದ್ದರು. ಗಾಯಕರಾದ ವೈರಮುಡಿ, ಸಂತೆಕಸಲಗೆರೆ ಬಸವರಾಜು ನೇತೃತ್ವದ ತಂಡ ಗೀತೆ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net