

ಮಂಡ್ಯ: ತಮ್ಮ ಕೌಶಲ ಹಾಗೂ ಕೆಲಸದ ಮೇಲೆ ಗೌರವವಿರಿಸಿಕೊಳ್ಳುವುದು ಅಗತ್ಯ ಎಂದು ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಪಾದಿಸಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿರವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಮಾಡುವ ವೃತ್ತಿ ಮತ್ತು ಕಸುಬಿನ ಮೇಲೆ ಗೌರವವಿಟ್ಟುಕೊಂಡಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಜತೆಗೆ ಸಾರ್ಥಕತೆ ಲಭಿಸುತ್ತದೆ ಎಂದರು.
ಇಂದು ಪಂಚ ಕಸುಬುಗಳಲ್ಲಿರುವ ವಿಶ್ವಕರ್ಮರಲ್ಲಿ ಬಹಳ ಶ್ರಮವಿದೆ. ಇಂದಿನ ತಲೆಮಾರು ಸಮಾಜದ ವೃತ್ತಿಯಲ್ಲಿ ಮುಂದುವರೆಯುವುದೋ ಇತರೆ ಕೆಲಸಗಳನ್ನು ಅರಸಿ ಹೋಗುವುದೋ ಎಂಬ ಮನೋಭಾವ ಬರುತ್ತಿದೆ. ನಮ್ಮ ವೃತ್ತಿಯಲ್ಲಿ ಅಷ್ಟು ಕಷ್ಟಗಳಿವೆ. ನಾನು ಬಾಲರಾಮನ ಮೂರ್ತಿ ಕೆತ್ತಲು ಆರಂಭಿಸಿ ಶೇ.60ರಷ್ಟು ಕೆಲಸ ಪೂರೈಸಿದ್ದೆ. ಅದರಲ್ಲಿ ಲೋಪವಿದೆ ಎಂದು ಹಿರಿಯರು ತಿಳಿಸಿದಾಗ ಬಹಳ ನೋವಾಯಿತು. ನಂತರ ನನ್ನ ಆರಾಧ್ಯದೈವ ಸಿದ್ದಪ್ಪಾಜಿಯ ಕಂಡಾಯ ಮತ್ತು ನನ್ನ ತಂದೆಯ ಭಾವಚಿತ್ರವನ್ನಿರಿಸಿಕೊಂಡು ಹೊಸದಾಗಿ ಬಾಲರಾಮನ ಮೂರ್ತಿಯ ಕುಸುರಿ ಕೆತ್ತನೆ ಆರಂಭಿಸಿದೆ. ಅತ್ಯಂತ ಶ್ರಮ ಮತ್ತು ಏಕಾಗ್ರತೆಯಿಂದ ಕೆಲಸ ಮಾಡಿದೆ. ನಂತರ ಅದಕ್ಕೆ ಸಂದ ಪ್ರತಿಫಲ ಏನೆಂಬುದು ಎಲ್ಲರಿಗೂ ತಿಳಿದಿದೆ. ಹಾಗೆ ನಮ್ಮ ಶ್ರಮದ ಕಾರ್ಯದಲ್ಲಿ ಒಂದು ಸಾರ್ಥಕತೆ ಮತ್ತು ವರ್ಣಿಸಲಾಗದ ಸಂತೋಷವಿರುತ್ತದೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪ ಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ಅವರು ವಿಶ್ವದಲ್ಲಿ ಕರ್ನಾಟಕವನ್ನು ಶಿಲ್ಪಕಲೆಯ ಬೀಡು ಎನ್ನುವಂತಾಗಲು ಕಾರಣರಾದರು. ಈಗ ಅಯೋಧ್ಯಾ ರಾಮನ ಮೂರ್ತಿ ಕೆತ್ತನೆಯ ಮೂಲಕ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕರ್ನಾಟಕದ ಹೆಮ್ಮೆಯಾಗಿ ರಾಜ್ಯದ ಕೀರ್ತಿಯನ್ನು ಬೆಳಗಿದ್ದಾರೆಂದು ಬಣ್ಣಿಸಿದರು.
ಮನುಷ್ಯನ ಜೀವನಕ್ಕೆ ಏನು ಅಗತ್ಯವಿದೆಯೋ ಅದೆಲ್ಲವೂ ಪಂಚಕಸುಬು ಮಾಡುವ ವಿಶ್ವಕರ್ಮರಿಂದ ಒದಗಿಸಲ್ಪಡುತ್ತಿದೆ. ಹಾಗಾಗಿ ವಿಶ್ವಕರ್ಮ ಸಮುದಾಯಕ್ಕೆ ಪ್ರಾಮುಖ್ಯತೆಯಿದೆ. ಕಬ್ಬಿಣ ಕೆಲಸ, ಮರಗೆಲಸ, ಲೋಹ ಶಿಲ್ಪ, ಕಾಷ್ಟ ಶಿಲ್ಪ ಹಾಗೂ ಶಿಲಾ ಶಿಲ್ಪಿಗಳು ಹೀಗೆ ಪಂಚ ಕಸುಬುಗಳು ಈ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.
ಸಾಹಿತಿ ಕೆ.ಪಿ.ಸ್ವಾಮಿ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷ ನಾಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿರುಮಲಾಚಾರ್, ಕೆಪಿಸಿಸಿ ಸದಸ್ಯೆ ಪವಿತ್ರಾ ಆಚಾರ್, ನಗರಸಭೆ ಸದಸ್ಯೆ ಲಲಿತಾ ಭದ್ರಾಚಾರ್, ಮುಖಂಡರಾದ ವೈ.ಬಿ.ಶ್ರೀನಿವಾಸಮೂರ್ತಿ, ಎಂ.ಬಿ.ರಮೇಶ್, ಎಲ್.ಆನಂದ್, ಎಂ.ಕೆ.ನರಸಿಂಹಾಚಾರ್, ಎಂ.ಎನ್.ರಮೇಶ್, ಸುದರ್ಶನ್, ತೈಲೂರು ಆನಂದ್, ಗಂಜಾಂ ರಾಜಣ್ಣ, ಮೋಹನ್, ದೇವರಾಜ್, ಕೃಷ್ಣಾಚಾರ್ ಇತರರಿದ್ದರು.
ಇದೇ ವೇಳೆ ಶಿಲ್ಪಿ ಅರುಣ್ ಯೋಗಿರಾಜ್, ಮದ್ದೂರಿನ ಬಾಲಪ್ರತಿಭೆ ಚಿತ್ರಕಲಾವಿದ ವಿಷ್ಣು ಪ್ರಸಾದ್ ಹಾಗೂ ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಾಧಕರನ್ನು ಅಭಿನಂದಿಸಲಾಯಿತು.