ಸೂಕ್ತ ಶೀರ್ಷಿಕೆ ಕೊಟ್ಟವರಿಗೆ ಬಹುಮಾನ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

Commemoration Committee Meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸ್ಮರಣ ಸಂಚಿಕೆಗೆ ಶೀರ್ಷಿಕೆ ಆಹ್ವಾನಿಸಲಾಗಿದೆ. ಆಸಕ್ತರು ಮುಚ್ಚಿದ ಲಕೋಟೆಯಲ್ಲಿ ಶೀರ್ಷಿಕೆಯನ್ನು ನ.20ರೊಳಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಡ್ಯ ಇಲ್ಲಿಗೆ ಸಲ್ಲಿಸಬಹುದು. ಆಯ್ಕೆಯಾದ ಶೀರ್ಷಿಕೆಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮರಣ ಸಂಚಿಕೆಗೆ ಸುಮಾರು 110 ವಿಷಯ ನೀಡಿ ಲೇಖನ ಬರೆಯುವಂತೆ ಮನವಿ ಸಲ್ಲಿಸಲಾಗಿತ್ತು. ಈಗಾಗಲೇ ಸುಮಾರು 40 ಲೇಖನ ಬಂದಿವೆ. ಜಿಲ್ಲೆಯ ಭೌಗೋಳಿಕ, ನೈಸರ್ಗಿಕ, ಪ್ರಾದೇಶಿಕತೆ, ಪುರಾತತ್ವ ನೆಲೆಗಳು, ಜನಸಮುದಾಯ, ರೈತ ಸಂಘಟನೆ ಸ್ವರೂಪ ಹೋರಾಟ ವ್ಯಾಪ್ತಿ ಸೇರಿದಂತೆ 110 ಕ್ಕೂ ಹೆಚ್ಚು ವಿಷಯ ರಚಿಸಲಾಗಿದೆ ಎಂದರು.

ಸ್ಮರಣ ಸಂಚಿಕೆಯನ್ನು 5 ಭಾಗವಾಗಿ ವಿಂಗಡಿಸಿ ಆಯಾ ಭಾಗದ ಲೇಖನಗಳನ್ನು ಪಡೆದು ಚರ್ಚಿಸಿ ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಮೌಲ್ಯಯುತವಾಗಿ ಸ್ಮರಣ ಸಂಚಿಕೆ ಮೂಡಿ ಬರಲಿ. ಸ್ಮರಣ ಸಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಮಹಾತ್ಮ ಗಾಂಧೀಜಿ, ಕುವೆಂಪು ಅವರ ಭೇಟಿ, ಕೆಆರ್‌ಎಸ್ ಡ್ಯಾಂ ನಿರ್ಮಾಣ, ಶಿವಪುರ ಸತ್ಯಾಗ್ರಹದಲ್ಲಿ ಹೋರಾಟಗಾರರು ಸೇರಿದಂತೆ ಇನ್ನಿತರೆ ಅಪರೂಪದ ಛಾಯಾಚಿತ್ರಗಳನ್ನು ಸ್ಮರಣ ಸಂಚಿಕೆಗೆ ಕಳುಹಿಸಿಕೊಡಬಹುದು. ಸಮಿತಿಯು ಪರಿಶೀಲಿಸಿ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಿದೆ. ಆಸಕ್ತರು ಜಿಲ್ಲಾ ಗ್ರಂಥಾಲಯದ ಸ್ಮರಣ ಸಂಚಿಕೆ ಕಚೇರಿಗೆ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಪುಸ್ತಕ ಸಮಿತಿ ಅಧ್ಯಕ್ಷ ಡಾ. ಮುದ್ದೇಗೌಡ, ಸಂಚಾಲಕ ಡಾ.ಮ.ರಾಮಕೃಷ್ಣ, ಸದಸ್ಯರಾದ ಎಂ.ವಿ.ಧರಣೇಂದ್ರಯ್ಯ, ಹುಲ್ಕೆರೆ ಮಹದೇವು, ಕೆ.ಪಿ.ಮೃತ್ಯುಂಜಯ, ಸಮ್ಮೇಳನ ವಿಶೇಷಾಧಿಕಾರಿ ಜಿ.ಆರ್.ಚಂದ್ರಶೇಖರ್ ಇತರರಿದ್ದರು.

ಸಂಚಾಲಕರ ನೇಮಕ: ಸ್ಮರಣ ಸಂಚಿಕೆಗೆ ಸಂಬಂಧಿಸಿದಂತೆ ಮಧುರ ಮಂಡ್ಯ ಉಪಸಮಿತಿಗೆ-ದ.ಕೋ.ಹಳ್ಳಿ ಚಂದ್ರಶೇಖರ್, ಮಂಡ್ಯ- ಕರ್ನಾಟಕ ಭಾರತ ಉಪಸಮಿತಿಗೆ-ಡಾ.ಎಂ.ಬಿ.ಸುರೇಶ್, ವಿಶ್ವ ಕರ್ನಾಟಕ ಉಪಸಮಿತಿ-ಹುಲ್ಕೆರೆ ಮಹದೇವು, ಅಭಿವೃದ್ಧಿ ಭಾರತ ಉಪಸಮಿತಿಗೆ- ಕೆ.ಪಿಮೃತ್ಯುಂಜಯ, ಚಿತ್ರಸಂಚಿಕೆ ಮಂಡ್ಯ ದರ್ಶನ ಉಪಸಮಿತಿಗೆ- ಡಾ.ಎಸ್.ಬಿ ಶಂಕರೇಗೌಡ ಅವರನ್ನು ಸಂಚಾಲಕರಾಗಿ ನೇಮಕ ಮಾಡಲು ಸಮಿತಿ ತೀರ್ಮಾನಿಸಿತು. ಅಂತೆಯೇ ನೆನಪಿನ ಸಂಪುಟಕ್ಕೆ ಗಣ್ಯರು ಹಾಗೂ ಜನಪ್ರತಿನಿಧಿಗಳಿಂದ ಸಂದೇಶ ಪಡೆಯಲು ಪತ್ರ ಮೂಲಕ ಮನವಿ ಮಾಡುವ ಹಾಗೂ ಸಂಪುಟದ ಮುಖಪುಟ ವಿನ್ಯಾಸ ಮಾಡುವ ಬಗ್ಗೆ ಸಮಿತಿಯ ಸದಸ್ಯರಿಂದ ಅಭಿಪ್ರಾಯ ಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net