

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹೊರತರುತ್ತಿರುವ ಸ್ಮರಣ ಸಂಚಿಕೆ ಯಾವುದೇ ಗೊಂದಲವಿಲ್ಲದಂತೆ ಸ್ಪಷ್ಟವಾಗಿರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಮರಣ ಸಂಚಿಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಕಾರ ಗ್ರಂಥದ ರೀತಿಯಲ್ಲಿ ಉಪಯುಕ್ತವಾಗುವಂತಿರಬೇಕು. ಮಾತ್ರವಲ್ಲದೆ ಸ್ಮರಣ ಸಂಚಿಕೆಯಲ್ಲಿ ಕಾಗುಣಿತ, ವ್ಯಾಕರಣ ದೋಷ, ವಾಕ್ಯ ರಚನಾ ದೋಷವಿರಬಾರದು. ಮುಖ್ಯವಾಗಿ ಸ್ಮರಣೆಯಲ್ಲಿ ಉಳಿಯುವಂತಹ ಉತ್ತಮ ಲೇಖನಗಳಿರಲಿ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಿಳಿಸುವ ಒಂದು ಚೌಕಟ್ಟಿನೊಳಗಿರುವಂತೆ ಲೇಖನಗಳ ಆಯ್ಕೆ ನಡೆಯಲಿ. ಒಂದೇ ವಿಷಯದ ಪುನರಾವರ್ತನೆಯಾಗುವುದು ಬೇಡ. ಲೇಖನಗಳನ್ನು ಕೆಲವು ಮಾನದಂಡಗಳ ಮೂಲಕ ಆಯ್ಕೆ ಮಾಡಿಕೊಳ್ಳುವಾಗ ಯಾವುದೇ ಮರ್ಜಿ-ಮಸಲತ್ತುಗಳಿಗೆ ಒಳಗಾಗದೇ ಗುಣಮಟ್ಟ ಹಾಗೂ ವಾಸ್ತವ ವಿಷಯಗಳಿಗೆ ಒತ್ತು ನೀಡುವುದು ಸೂಕ್ತ. ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗುವಂತಿರಲಿ. ಎಲ್ಲರೂ ಒಪ್ಪುವ ಭಾಷಾ ಶೈಲಿಯಲ್ಲಿ ಇರಲಿ. ಆಕರ್ಷಣೀಯ ಅರ್ಥಗರ್ಭಿತ ಸುಂದರವಾಗಿರಲಿ. ಸಮ್ಮೇಳನದಲ್ಲಿ ಸ್ಮರಣ ಸಂಚಿಕೆಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಗುವುದು. ಸಮ್ಮೇಳನ ಮುಗಿದ ನಂತರ ಸಮ್ಮೇಳನ ಅಧ್ಯಕ್ಷರ ಭಾಷಣ, ಛಾಯಾಚಿತ್ರಗಳನ್ನು ಸೇರಿಸಿದ ನಂತರ ಮತ್ತೊಂದು ಆಯೋಜಿಸಿ ಏರ್ಪಡಿಸಿ ಪೂರ್ಣ ಮುದ್ರಿತವಾದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.
ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಮ.ರಾಮಕೃಷ್ಣ, ಡಾ.ಕೆಂಪಮ್ಮ, ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ ಲೇಖನಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಾಗೂ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಪುಸ್ತಕ ಸಮಿತಿ ಉಪಾಧ್ಯಕ್ಷ ತೈಲೂರು ವೆಂಕಟಕೃಷ್ಣ, ಜಿಲ್ಲಾ ಗ್ರಂಥಾಲಯಾಧಿಕಾರಿ ಕೃಷ್ಣಮೂರ್ತಿ, ನಂದೀಶ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಕೃಷ್ಣೇಗೌಡ ಹುಸ್ಕೂರು, ಹರ್ಷ ವಿ.ಪಣ್ಣೆದೊಡ್ಡಿ, ಜಿ.ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಎಲ್.ಕೃಷ್ಣ, ರಂಗಸ್ವಾಮಿ, ಶ್ರೀನಿವಾಸಮೂರ್ತಿ, ಡಾ.ಎಸ್.ಶಿವರಾಂ, ಚಂದ್ರಶೇಖರ ಇತರರಿದ್ದರು.