

ಸಿದ್ದಾಪುರ: ಮನುಷ್ಯ ಜೀವನಕ್ಕೆ ಸದಭಿರುಚಿಯ ಕಲೆ ನೆಮ್ಮದಿ ಹಾಗೂ ಒಳಿತನ್ನು ಒದಗಿಸುತ್ತದೆ. ಅಂಥ ಕಲೆಗಳಿಗೆ ಜನತೆಯ ಪೋ›ತ್ಸಾಹ ಅಗತ್ಯ ಎಂದು ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಾಲಯ ಹಾಗೂ ದುರ್ಗಾವಿನಾಯಕ ಕೃಷಿಕ ಯುವಕಸಂಘದ ಸಹಯೋಗದಲ್ಲಿ ರಂಗ ಸೌಗಂಧ ರಂಗತಂಡದವರು ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಕಂದಗಲ್ ಹನುಮಂತರಾಯ ರಚನೆಯ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದ ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ ಕಲೆ ಕೇವಲ ರಂಜನೆಗೆ ಸೀಮಿತವಾಗಿಲ್ಲ. ಅದರ ಜವಾಬ್ದಾರಿ ಸಮಾಜಕ್ಕೆ ಮಾರ್ಗದರ್ಶಿಯಾಗುವದು ಕೂಡ. ನಮ್ಮ ಪರಂಪರೆಯ ಮೌಲ್ಯಗಳನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ದಾಟಿಸುವ ಶಕ್ತಿ ಅದಕ್ಕಿದೆ. ತಾಳಮದ್ದಳೆ,ಯಕ್ಷಗಾನದಂಥ ಕಲೆಗಳು ಪುರಾಣ ಪಾತ್ರಗಳ ಮೂಲಕ ಒಳಿತು ಮತ್ತು ಕೆಡುಕು ಯಾವುದು ಎನ್ನುವದನ್ನು ನಿರೂಪಿಸುತ್ತಿವೆ ಎಂದು ಹೇಳಿದರು.
ದುರ್ಗಾವಿನಾಯಕ ದೇವಾಲಯದ ಅಧ್ಯಕ್ಷ ಎಸ್.ಎಂ.ಹೆಗಡೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸರಸ್ವತಿ ಕಲಾಟ್ರಸ್ಟ್ ವತಿಯಿಂದ ಪಿ.ವಿ.ಹೆಗಡೆ ಹೊಸಗದ್ದೆ ಅವರು ಗಣಪತಿ ಹೆಗಡೆ ಹುಲಿಮನೆ ಅವರನ್ನು ಸನ್ಮಾನಿಸಿದರು. ರಂಗಸೌಗಂಧ ತಂಡದ ಮುಖ್ಯಸ್ಥ ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು. ರಾಜಾರಾಮ ಭಟ್ಟ ಹೆಗ್ಗಾರಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಪ್ರದರ್ಶನಗೊಂಡ ರಕ್ತರಾತ್ರಿ ನಾಟಕಕ್ಕೆ ಸಂಗೀತ ನಿರ್ದೇಶನ ರಾಜೇಂದ್ರ ಹೆಗಡೆ ಕೊಳಗಿ,ವಿನ್ಯಾಸ ಶ್ರೀಪಾದ ಹೆಗಡೆ ಕೋಡನಮನೆ, ವಾದ್ಯಗಳ ಸಹಕಾರ ಜಯರಾಮ ಭಟ್ಟ ಹೆಗ್ಗಾರಳ್ಳಿ, ಶಶಿಭೂಷಣ ಹೆಗಡೆ ತಂಗಾರ್ಮನೆ, ಈಶ್ವರ ಶಾಸ್ತ್ರಿ, ಸಂಜಯ ಭಟ್ಟ ಬಿಳಗಿ, ಧ್ವನಿ ಮತ್ತು ಬೆಳಕು ಉದಯ ಸೌಂಡ್ಸ ಶಿರಸಿ ಒದಗಿಸಿದ್ದರು.
ರಂಗದಲ್ಲಿ ಗಣಪತಿ ಹೆಗಡೆ ಗುಂಜಗೋಡ, ಶ್ರೀಪಾದ ಹೆಗಡೆ ಕೋಡನಮನೆ, ನಾಗಪತಿ ಭಟ್ಟ ವಡ್ಡಿನಗದ್ದೆ,ಪೂರ್ಣಚಂದ್ರ ಹೆಗಡೆ ಹುಲಿಮನೆ, ಶಮಂತ ಹೆಗಡೆ ಶಿರಳಗಿ, ರಾಮ ಅಂಕೋಲೆಕರ, ರಮೇಶ ಭಟ್ಟ ಲಕ್ಕಿಜಡ್ಡಿ, ಅಜಿತ್ ಭಟ್ಟ ಹೆಗ್ಗಾರಳ್ಳಿ, ಶುಭಾ ರಮೇಶ ಲಕ್ಕಿಜಡ್ಡಿ, ಪ್ರವೀಣಾ ಹೆಗಡೆ ಗುಂಜಗೋಡ, ಜಯಶ್ರೀ ಹೆಗಡೆ ಹುಲಿಮನೆ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.