

ಹೊಳೆನರಸೀಪುರ: ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ನಡೆದ ದುರ್ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮೃತ ಯುವಕರ ಕುಟುಂಬದವರಿಗೆ ಮುಖ್ಯಮಂತ್ರಿ ವಿಶೇಷ ಸವಲತ್ತು ಒದಗಿಸಬೇಕು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಒತ್ತಾಯಿಸಿದರು.
ತಾಲೂಕಿನ ಹಳೆಕೋಟೆ ಹೋಬಳಿಯ ಕೆಬಿ ಪಾಳ್ಯ ಹಾಗೂ ಕಬ್ಬನಹಳ್ಳಿಯಲ್ಲಿರುವ ಮೃತ ಯುವಕರ ಮನೆಗೆ ಸೋಮವಾರ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳುವುದರೊಂದಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆೆ ಮಾತನಾಡಿದರು. ರಾಜ್ಯದಲ್ಲೇ ಅತ್ಯಂತ ಭೀಕರ ಘಟನೆ. ಗ್ರಾಮಸ್ಥರು, ಯುವಕರು ಹಾಗೂ ಭಕ್ತರು ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದು, ದುಡಿಯುವ ಯುವಕರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಚಾಲಕನ ನಿರ್ಲಕ್ಷೃದಿಂದ ಮೃತಪಟ್ಟಿರುವುದು ತೀವ್ರ ನೋವು ತಂದಿದೆ ಎಂದರು.
ಗಣೇಶೋತ್ಸವದಲ್ಲಿ ಸಂತಸದಿಂದ ಭಾಗವಹಿಸಿದ್ದ ಯುವಕರು ಈ ದುರ್ಘಟನೆಯಲ್ಲಿ ಪ್ರಾಣ ಚೆಲ್ಲಿದ್ದಾರೆ. ಬಾಳಿ ಬದುಕಬೇಕಾದ ಪದವೀಧರ ಯುವಕರೇ ಮರಣ ಹೊಂದಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಅಮಾಯಕರು ಪ್ರಾಣ ಕಳೆದುಕೊಂಡಿದ್ದರಿಂದ ಕುಟುಂಬ ವರ್ಗ ಸಂಕಷ್ಟದಲ್ಲಿದೆ ಎಂದು ಹೇಳಿದರು.
ಈ ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸವಲತ್ತುಗಳನ್ನು ಅವರ ಕುಟುಂಬದವರಿಗೆ ಒದಗಿಸುವಂತೆ ಆಯಾ ತಾಲೂಕು ದಂಡಾಧಿಕಾರಿಗೆ ಸರ್ಕಾರ ಸೂಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ದಕ್ಷ, ಉತ್ತಮ ಆಡಳಿತಗಾರ ರಾಗಿದ್ದು ದುರ್ಘಟನೆ ನಡೆದ ದಿನ ಗಾಯಾಳುಗಳನ್ನು ವಿಚಾರಿಸಿ ಚಿಕಿತ್ಸೆ ಕೊಡಿಸುವ ಮೂಲಕ ದುಖಃದಲ್ಲಿದ್ದವರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎಂದರು.
ಮೃತ ಯುವಕರ ಕುಟುಂಬ ಕಡುಬಡತನದಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ. ಅವರ ಮನೆಗಳು ಹಾಗೂ ಅವರು ಬದುಕುತ್ತಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಕುಟುಂಬವನ್ನು ನಿರ್ವಹಣೆ ಮಾಡಬೇಕಾದ ಮಕ್ಕಳು ಆಕಸ್ಮಿಕ ದುರ್ಘಟನೆಯಲ್ಲಿ ಪ್ರಾಣ ಚೆಲ್ಲಿರುವುದು ಅವರ ಕುಟುಂಬಕ್ಕೆ ಆಘಾತವಾಗಿದೆ ಎಂದರು.
ತಹಸೀಲ್ದಾರ್ ವೈ.ಎನ್.ರೇಣುಕುಮಾರ್, ಮೃತ ಯುವಕನ ತಂದೆ ಮೂರ್ತಿ ಇತರರು ಇದ್ದರು.