

ಹರಿಹರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ನಗರದ ತಹಸೀಲ್ದಾರ್ ಕಚೇರಿ ಎದುರು ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ಕಳೆದ ಸಲ ಮುಷ್ಕರ ನಡೆಸಿದಾಗ 8 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ತಾತ್ಕಾಲಿಕವಾಗಿ ಕೈಬಿಡಲಾಗಿತ್ತು. ಆದರೆ 4 ತಿಂಗಳು ಕಳೆದರೂ ಯಾವುದೇ ಬೇಡಿಕೆ ಈಡೇರಿಸದ ಹಿನ್ನೆಲೆಯಲ್ಲಿ ಮತ್ತೆ ಮುಷ್ಕರ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಸುಸಜ್ಜಿತ ಕಚೇರಿ ಸೇರಿ ಯಾವುದೇ ಮೂಲ ಸೌಕರ್ಯ ನೀಡದೆ ತಮ್ಮನ್ನು ದುಡಿಸಿಕೊಳ್ಳಲಾಗುತ್ತಿದೆ. ಆದಾಗ್ಯೂ ತಾಂತ್ರಿಕ ಕೆಲಸ ಶ್ರೇಣಿಯಲ್ಲಿ ವೇತನ, ಯಾವುದೇ ಪದೋನ್ನತಿ ನೀಡುತ್ತಿಲ್ಲ, ಪತಿ, ಪತ್ನಿಯ ವರ್ಗಾವಣೆ ಕೂಡಾ ಮಾಡುತ್ತಿಲ್ಲ, ತಮ್ಮನ್ನು ಡಿ ದರ್ಜೆ ನೌಕರರಿಗಿಂತ ಕೀಳಾಗಿ ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇ-ಪೌತಿ ಖಾತಾ ಆಂದೋಲನ ಕೈಬಿಡಬೇಕು. ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದ ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿಯ ಹುದ್ದೆಯ ವೃಂದ ಹಾಗೂ ನೇಮಕಾತಿ ತಿದ್ದುಪಡಿ ಮಾಡಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಜೀವಹಾನಿ ಸಂಭವಿಸಿದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮಂಜೂರು ಮಾಡಬೇಕು. ಪ್ರಯಾಣ ಭತ್ಯೆ 500 ರಿಂದ 5 ಸಾವಿರ ರೂ. ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕೆ.ಸಂತೋಷ್ ಪಾಟೀಲ್ ಅವರು ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು, ಕರ್ತವ್ಯಕ್ಕೆ ಹಾಜರಾಗಿ, ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಕೋರಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಗ್ರಾಮ ಆಡಳಿತಾಧಿಕಾರಿ ನೌಕರರ ಸಂಘದ ಅಧ್ಯಕ್ಷ ಹೇಮಂತಕುಮಾರ್, ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ಖಜಾಂಚಿ ಸೌಮ್ಯ ಮಲ್ಲಿಕಾರ್ಜುನ, ಮಾರುತಿ, ಶಿವಪ್ರಕಾಶ್, ಹರೀಶ್, ಬೋರಯ್ಯ, ಪುಷ್ಪ ದೊಡ್ಡಮನಿ, ಅನ್ನಪೂರ್ಣ, ನವೀನ್ ಕಟ್ಟೇರ, ರೇಖಾ ಇತರರಿದ್ದರು.