ರೋಗಿಗಳಿಗೆ ದೇವರಂತೆ ಸಾಂತ್ವನ, ಶುಶ್ರೂಷೆ

Bel_SDM
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದೇವಸ್ಥಾನಗಳಿಗೆ ಮತ್ತು ಆಸ್ಪತ್ರೆಗಳಿಗೆ ಜನ ಅನೇಕ ಭರವಸೆ, ನಿರೀಕ್ಷೆ ಮತ್ತು ಸಮಸ್ಯೆಗಳೊಂದಿಗೆ ಬರುತ್ತಾರೆ. ರೋಗಿಗಳಿಗೆ ದೇವರ ರೂಪದಲ್ಲಿ ಪ್ರೀತಿ-ವಿಶ್ವಾಸ, ಆತ್ಮೀಯತೆ ಮತ್ತು ಸಾಂತ್ವನದೊಂದಿಗೆ ಶುಶ್ರೂಷೆ ನೀಡಿ ಅವರ ಚಿಂತೆಯನ್ನು ದೂರಮಾಡಬೇಕು ಎಂದು ಎಂದು ಧರ್ಮಸ್ಥಳದ ಹೇಮಾವತಿ ವೀ.ಹೆಗ್ಗಡೆಯವರು ಹೇಳಿದರು.

ಬುಧವಾರ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಸ್ಪರ್ಶ ಉಚಿತ ಡಯಾಲಿಸಿಸ್ ಸೇವೆ ಉದ್ಘಾಟಿಸಿ ಮಾತನಾಡಿ, ತಾಯಿಯ ಮಮತೆಯ ಮಡಿಲಲ್ಲಿ ಸ್ಪರ್ಶದಿಂದ ಮಗು ನಿರಾಳವಾಗಿರುವಂತೆ ವೈದ್ಯರ ನಗುಮೊಗದ, ಪ್ರೀತಿ-ವಿಶ್ವಾಸದ ಮಾಂತ್ರಿಕ ಸ್ಪರ್ಶದಿಂದ ರೋಗಿಗಳು ಶೀಘ್ರ ಗುಣಮುಖರಾಗಿ ಮರಳಿ ಆರೋಗ್ಯ ಭಾಗ್ಯವನ್ನು ಹೊಂದುತ್ತಾರೆ. ವೈದ್ಯರು ಮತ್ತು ದಾದಿಯರು ರೋಗಿಗಳಿಗೆ ಪ್ರೀತಿಯಿಂದ ಸೇವೆ ನೀಡಿ ಅವರ ಭಯ, ಆತಂಕ ನಿವಾರಿಸಿ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ಮೂಡಿಸಬೇಕು. ರೋಗಿಗಳ ಸಂಖ್ಯೆ ಜಾಸ್ತಿಯಾದಂತೆ ನಿಗಾ ಮತ್ತು ಶುಶ್ರೂಷೆಯ ಗುಣಮಟ್ಟ ಕಡಿಮೆಯಾಗಬಾರದು. ಉಚಿತ ಶುಶ್ರೂಷೆ ನೀಡುವವರಲ್ಲಿ ಮತ್ತು ಪಡೆಯುವವರಲ್ಲಿ ಉಚಿತ ಎಂಬ ಭಾವನೆ ಇರಬಾರದು. ಉಜಿರೆಯಲ್ಲಿರುವ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡುವ ವೈದ್ಯರು, ದಾದಿಯರು ಮತ್ತು ಇತರ ಸೌಜನ್ಯಪೂರ್ಣ ಸೇವೆಯ ಸಿಬ್ಬಂದಿ ಇದ್ದು ಸೇವಾಕಾರ್ಯ ವಿಸ್ತರಿಸಲು ನಮಗೆ ಉತ್ಸಾಹ ಮೂಡಿ ಬಂದಿದೆ ಎಂದರು.

ವೈದ್ಯ ಡಾ.ಬಾಲಕೃಷ್ಣ ಭಟ್, ವೈದ್ಯಕೀಯ ನಿರೀಕ್ಷಕ ಡಾ.ದೇವೇಂದ್ರಕುಮಾರ್, ಮುಖ್ಯವೈದ್ಯಾಧಿಕಾರಿ ಡಾ.ಸಾತ್ವಿಕ್ ಜೈನ್ ಉಪಸ್ಥಿತರಿದ್ದರು. ಡಯಾಲಿಸಿಸ್ ಬಗ್ಯೆ ಸೌಮ್ಯಾ ಕವನ ವಾಚನ ಮಾಡಿದರು. ಪ್ರಮೀಳಾ ಅನಿಸಿಕೆ ವ್ಯಕ್ತಪಡಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಜನಾರ್ದನ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಚಿದಾನಂದ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net