ದೀಪಾವಳಿಗೆ 'ಅಲೆಮಾರಿ' ಆಕಾಶಕಾಯ ಗೋಚರ

Dhoomakethu 1
Published on

ಲೆಮೆನ್​ ಧೂಮಕೇತು ಅ.21ರಂದು ವೀಕ್ಷಣೆಗೆ ಲಭ್ಯ

ವಿಜಯವಾಣಿ ಸುದ್ದಜಾಲ ಉಡುಪಿ

ಅಕ್ಟೋಬರ್​ ತಿಂಗಳ ಮೂರನೇ ವಾರದ ಕೊನೆಗೆ ಹಾಗೂ ಅಕ್ಟೋಬರ್​ ಅಂತ್ಯಕ್ಕೆ ಲೆಮೆನ್​, ಸ್ವಾನ್​, ಅಟ್ಲಸ್​ ಎಂಬ ಮೂರು ಧೂಮಕೇತುಗಳು ದೀರ್ಘವೃತ್ತದಲ್ಲಿ ಸೂರ್ಯನನ್ನು ಸುತ್ತು ಹೊಡೆಯುತ್ತಿರುವುದು ಗೋಚರಿಸಲಿವೆ. ಅವುಗಳಲ್ಲಿ ಲೆಮೆನ್​ ಧೂಮಕೇತು ಮಾತ್ರ ಬರಿಗಣ್ಣಿಗೆ ಕಾಣಿಸುತ್ತಿದೆ ಎಂದು ಭೌತಶಾಸ್ತ್ರಜ್ಞ ಉಡುಪಿಯ ಡಾ. ಎ.ಪಿ. ಭಟ್​ ಮಾಹಿತಿ ನೀಡಿದ್ದಾರೆ.

Dhoomakethu 2
ಅ.21ರಂದು ಭೂಮಿಗೆ ಸುಮಾರು 90 ಮಿಲಿಯ ಕಿ.ಮೀ. ಸಮೀಪ ಬಂದು ಸಂಜೆಯ ಕೆಲ ಸಮಯ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತಋಷಿ ಆಕಾಶಪುಂಜದ ಬಾಲದಲ್ಲಿರುವ ಮರೀಚಿ ನಕ್ಷತ್ರದ ಪಕ್ಕ ಹಾದು ಸ್ವಾತಿ ನಕ್ಷತ್ರದ ಸಮೀಪದಲ್ಲಿ ಲೆಮೆನ್​ ಧೂಮಕೇತು ಕಾಣಿಸಲಿದೆ.

ನ.8ರಂದು ಸೂರ್ಯನ ಸಮೀಪ ತಲುಪಿ ಹಿಂತಿರುಗುತ್ತದೆ. ಸುಮಾರು 1,350 ವರ್ಷಗಳಿಗೊಮ್ಮೆ ಈ ಲೆಮೆನ್​ ಧೂಮಕೇತು ಸೂರ್ಯನ ಸಮೀಪ ಬಂದು ಹೋಗುತ್ತದೆ. ಉಳಿದ ಎರಡು ಧೂಮಕೇತುಗಳಲ್ಲಿ ಅಟ್ಲಸ್​ ಭಾರಿ ವಿಶೇಷ. ಅದು ಲೆಮನ್​ ಹಾಗೂ ಸ್ವಾನ್​ ಧೂಮಕೇತುಗಳಂತೆ ಸೌರವ್ಯೂಹದ ಊರ್ಸ್​ ಕ್ಲೌಡ್​ನಿಂದ ಬಂದುದಲ್ಲ. ಸೌರವ್ಯೂಹದ ಹೊರಗಿನಿಂದ ಅನಂತ ಆಕಾಶದಿಂದ ಬಂದಿದೆ ಎನ್ನಲಾಗುತ್ತದೆ. ಹೀಗಾಗಿ ಅದರ ಅಧ್ಯಯನ ಹೊಸ ಹೊಸ ವಿಚಾರಗಳನ್ನು ಒದಗಿಸುತ್ತಿದೆ. ಅದರಲ್ಲಿರುವ ಖನಿಜಗಳು ವಿಶ್ವ ಸೃಷ್ಟಿಯ ಅಧ್ಯಯನಕ್ಕೂ ಹೊಸ ಆಯಾಮ ಕೊಡುತ್ತಿದೆ ಎನ್ನುತ್ತಾರೆ ಡಾ. ಎ.ಪಿ. ಭಟ್​.

ಆಕಾಶದಲ್ಲಿ ರಾತ್ರಿಯಲ್ಲಿ ಕಾಣುವ ಚಂದ್ರನನ್ನು ಬಿಟ್ಟರೆ ಧೂಮಕೇತುಗಳೂ ಬಲುಚೆಂದ. ಸೂರ್ಯನ ಸಮೀಪದಲ್ಲಿರುವಾಗ ಉದ್ದುದ್ದ ಬಾಲ ಬೆಳೆಸಿಕೊಂಡು ವೀಕ್ಷಕರ ಮನ ಸೂರೆಗೊಳ್ಳುತ್ತವೆ. ಈ ಧೂಮಕೇತುಗಳೊಂದಿಗೆ ಪ್ರತಿವರ್ಷವೂ ಇದೇ ಸಮಯದಲ್ಲಿ ಗೋಚರಿಸುವ ಹ್ಯಾಲಿ, ಧೂಮಕೇತುವಿನ ಉಲ್ಕಾಪಾತವು ಅಮಾವಾಸ್ಯೆಯ ಕತ್ತಲ ಆಕಾಶವನ್ನು ರಂಗೇರಿಸಲಿದೆ. ಆಕಾಶಕಾಯದ ಕೌತುಕ ವೀಕ್ಷಿಸಬೇಕು. | ಡಾ. ಎ.ಪಿ. ಭಟ್​. ಭೌತಶಾಸ್ತ್ರಜ್ಞ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net