ಸಾಧಕರು, ಕಲಾವಿದರಿಗಾಗಿ ಕಾರ್ಯಕ್ರಮ ಆಯೋಜನೆ: ಶಾಸಕ ರವಿಕುಮಾರ್ ಗಣಿಗ ೋಷಣೆ

Comedy evening ceremony Mandya
Published on

ಮಂಡ್ಯ: ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ೋಷಣೆ ಮಾಡಿದರು.

ನಗರದ ಬಾಲಭವನ ಉದ್ಯಾನದ ಆವರಣದಲ್ಲಿ ಭಾರತ ಸೇವಾದಳ, ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಅಭಿನಂದನೆ ಹಾಗೂ ಹಾಸ್ಯ ಸಂಜೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನ ಹಾಗೂ ಬಾಲಭವನದಲ್ಲಿ ಪ್ರತ್ಯೇಕ ಕಾರ್ಯಕ್ರಮ ಆಯೋಜನೆ ಮಾಡೋಣ. ಈ ಸಂಬಂಧ ಸ್ಥಳೀಯ ನಾಗರಿಕನ್ನೊಳಗೊಂಡ ಸಮಿತಿ ರಚನೆ ಮಾಡಿ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಬಾಲಭವನ ಉದ್ಯಾನದ ಅಭಿವೃದ್ಧಿಗಾಗಿ ಅನುದಾನ ನೀಡಲಾಗಿತ್ತು. ಇದೀಗ ಮತ್ತಷ್ಟು ಅಭಿವೃದ್ಧಿಗಾಗಿ ಸಿಎಂ ವಿಶೇಷ ಅನುದಾನದಲ್ಲಿ 20 ಲಕ್ಷ ರೂ ನೀಡಲಾಗುವುದು. ಎರಡು ವರ್ಷದ ಹಿಂದಿನ ಮಂಡ್ಯ ನಗರಕ್ಕೂ ಪ್ರಸ್ತುತಕ್ಕೂ ಸಾಕಷ್ಟು ಬದಲಾವಣೆ ಕಂಡಿದೆ. 100 ಕೋಟಿ ರೂ ವೆಚ್ಚದ ಅಭಿವೃದ್ಧಿ ಕೆಲಸ ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಮುಖ್ಯವಾಗಿ ಗುಂಡಿ ಬಿದ್ದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೂ ವಿಪಕ್ಷಗಳು ಏನು ಅಭಿವೃದ್ಧಿ ಕೆಲಸವಾಗುತ್ತಿಲ್ಲ ಎನ್ನುತ್ತಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ, ಮಹಿಳೆಗೆ ರಕ್ಷಣೆ ಹಾಗೂ ಮೂಲ ಸೌಲಭ್ಯ ಸಿಗಬೇಕೆನ್ನುವುದೆ ನಮ್ಮ ಆಶಯವಾಗಿದ್ದು, ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರಾಯೋಜಕತ್ವ ಯೋಜನೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಇದು ಸರ್ಕಾರದ ಯೋಜನೆಯಾಗಿದ್ದು, ಪತಿಯಿಂದ ದೂರವಾದ ಪತ್ನಿ ಹಾಗೂ ತಂದೆ-ತಾಯಿ ಇಲ್ಲದ ಮಕ್ಕಳನ್ನ ನೋಡಿಕೊಳ್ಳಲು ಇರುವಂತಹ ಯೋಜನೆ ಇದಾಗಿದೆ. ತಾಲೂಕು ಕಚೇರಿ ಮತ್ತು ಜಿಲ್ಲಾಡಳಿತದ ಮೂಲಕ ಮಾಹಿತಿ ಪಡೆದುಕೊಂಡು ಅದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಶಾಸಕ ರವಿಕುಮಾರ್ ಅವರು ಜನಸ್ನೇಹಿಯಾಗಿದ್ದು, ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅದು ಮುಂದುವರಿಯಲಿ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಪಕ್ಕ ಕುಳಿತುಕೊಳ್ಳುವುದೇ ಒಂದು ರೀತಿ ಸಂತಸವಾಗುತ್ತಿದೆ. ಅದೇ ರೀತಿ ಹಿರಿಯ ನಟ ಅಶ್ವಥ್ ಅವರ ಮಗ ಅವರ ಪಕ್ಕ ಕುಳಿತಿದ್ದೇವೆ ಎಂದು ಪ್ರಶಂಸಿಸಿದರು.

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಬಿ.ಸಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು, ನಟ ಶಂಕರ್ ಅಶ್ವಥ್, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್, ಸೇವಾದಳದ ಎಸ್.ಕೆ.ಶಿವಪ್ರಕಾಶ್‌ಬಾಬು, ಮಿಮಿಕ್ರಿ ಮೈಸೂರು ರಮೇಶ್‌ಬಾಬು, ಮಂಡ್ಯ ಸತ್ಯ, ಜನಾರ್ಧನ ಕೊಂಡ್ಲಿ ಭಾಗವಹಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net