ನನಸಾಗುತ್ತಿದೆ ರಾಮರಾಜ್ಯದ ಕನಸು - ಸಚಿವ ಅಂಗಡಿ

Suresh Angadi
Published on

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅವರ ದಕ್ಷ ಆಡಳಿತದಿಂದಾಗಿ ದೇಶದ ಜನ ಕಂಡಿದ್ದ ‘ಅಯೋಧ್ಯೆಯಲ್ಲಿ ರಾಮರಾಜ್ಯದ ಕನಸು’ ಇದೀಗ ನನಸಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಜನರಿಗೆ ನೀಡಿದ ಭಾಷೆ ಪೂರೈಸುವ ಕೆಲಸ ಮಾಡುತ್ತಿದೆ. 400 ವರ್ಷಗಳಿಂದ ನಡೆದ ಹೋರಾಟಕ್ಕೆ ಸಾವಿರಾರು ಜನ ಹೆಗಲು ಕೊಟ್ಟಿದ್ದಾರೆ. ಹಲವರು ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಅವರೆಲ್ಲರ ತ್ಯಾಗದ ಪ್ರತೀಕವಾಗಿ ಆಗಸ್ಟ್ 5
ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನಡೆಯಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕನಸು ನನಸಾಗುವ ಹಂತದಲ್ಲಿದೆ. ರಾಮರಾಜ್ಯ ನಿರ್ಮಾಣಕ್ಕೆ ಕೈ ಜೋಡಿಸೋಣ ಎಂದರು.

ಬಿಜೆಪಿಯ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ನಡೆದ ರಥಯಾತ್ರೆ ರಾಮಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿತ್ತು. ಅಯೋಧ್ಯಾ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪು ರಾಮಮಂದಿರದ ಸಾಕಾರಕ್ಕೆ ಹಾದಿ ಮಾಡಿದವು. ಲಾಲ್‌ಕೃಷ್ಣ ಅಡ್ವಾಣಿ, ಮುರಳಿಮನೋಹರ ಜೋಶಿ, ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮ ಹಾಗೂ ದೇಶದ ಪ್ರಜೆಗಳು ನೀಡುವ 10 ರೂಪಾಯಿ ಅಥವಾ 100 ರೂಪಾಯಿಯಿಂದ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಕ್ಕಳ ಭವಿಷ್ಯಕ್ಕೆ ಪೂರಕ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳಿಗೆ ಮುಂದೆ ಉಜ್ವಲ ಭವಿಷ್ಯ ನೀಡಲಿದೆ. ಕೇವಲ ಪದವಿ ಪಡೆದು ಸರ್ಕಾರಿ ನೌಕರಿಗೆ ಹೋಗುವುದೇ ಶಿಕ್ಷಣದ ಉದ್ದೇಶವಾಗಿರಬಾರದು. ಮಕ್ಕಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಾವೀಣ್ಯತೆ ಉಂಟು ಮಾಡುವ ಉದ್ದೇಶದಿಂದ ಲೋಕಲ್, ವೋಕಲ್, ಉದ್ಯೋಗ ಲಭಿಸಲು ಈ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಯೋಜನವಾಗಲಿದೆ ಎಂದರು.

ದೇಶದ ಶಿಕ್ಷಣ ನೀತಿಯನ್ನು 1968, 1986 ರಲ್ಲಿಯೂ ಬದಲಿಸಲಾಗಿತ್ತು. ಇದೀಗ ಭಾರತ ಜಗತ್ತಿನಲ್ಲಿಯೇ ನಾಲೇಜ್ ಪವರ್ ಮೂಲಕ ಸೂಪರ್ ಪಾವರ್ ಆಗಬೇಕು ಎಂಬ ಆಶೋತ್ತರಗಳಿಂದ ಅನೇಕ ತಜ್ಞರ ವರದಿಗಳನ್ನು ಪರಿಗಣಿಸಿಯೇ 2020ರಲ್ಲಿ ದೇಶದ ಶಿಕ್ಷಣ ನೀತಿ ಬದಲಾಯಿಸಲಾಗಿದೆ ಎಂದು ಸಚಿವ ಅಂಗಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net