

ಮೈಸೂರು: ವಿದ್ಯಾವಂತ ಯುವಕ, ಯುವತಿಯರು ರಾಜಕಾರಣಕ್ಕೆ ಬಂದು ಗಾಂಧಿ ಮಾರ್ಗದಲ್ಲಿ ನಡೆಯಬೇಕು ಎಂದು ನ್ಯಾಯಾಧೀಶೆ ಜೆ.ಸಿ.ಭಾಗ್ಯಾ ಸಲಹೆ ನೀಡಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಿಂದ ಬುಧವಾರ ಆಯೋಜಿಸಿದ್ದ 21ನೇ ಶತಮಾನದಲ್ಲಿ ಗಾಂಧೀಜಿ ಅರಿವು ಜಾಥಾಕ್ಕೆ ನಗರದ ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.
ಗಾಂಧೀಜಿ ಪ್ರಪಂಚ ಕಂಡ ಅತ್ಯಂತ ಮಹಾನ್ ವ್ಯಕ್ತಿ. ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಮಕ್ಕಳು, ವೈದ್ಯರು, ಇಂಜಿನಿಯರ್, ಐಎಎಸ್ ಅಧಿಕಾರಿ ಆಗಬೇಕು ಎಂದು ಬಯಸುತ್ತಾರೆ. ಯಾರೊಬ್ಬರು ನಮ್ಮ ಮಕ್ಕಳು ರಾಜಕಾರಣಿಯಾಗಬೇಕು ಎಂದು ಬಯಸುವುದಿಲ್ಲ ಎಂದರು.
ಪ್ರಸ್ತುತ ದಿನಮಾನದಲ್ಲಿ ಉತ್ತಮ ವಿದ್ಯಾವಂತ ಯುವಕ, ಯುವತಿಯರು ರಾಜಕೀಯಕ್ಕೆ ಬಂದು ಗಾಂಧಿ ಮಾರ್ಗದಲ್ಲಿ ನಡೆದರೆ ದೇಶ ಅಹಿಂಸೆ ಮಾರ್ಗದಲ್ಲಿ ಮುಂದುವರಿಯಲು ಸಾಧ್ಯ ಎಂದು ಹೇಳಿದರು.
ಶ್ರೀನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ, ಬೆಂಗಳೂರು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ, ಪ್ರಾಂಶುಪಾಲೆ ಡಾ.ಎಂ.ಶಾರದಾ, ಉಪ ಪ್ರಾಂಸುಪಾಲ ಡಾ. ಜಿ. ಪ್ರಸಾದಮೂರ್ತಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಎ.ಪೂರ್ಣಿಮಾ, ಸಹಾಯಕ ಪ್ರಾಧ್ಯಾಪಕಿ ಸಿ.ಎಸ್. ತಾರಾ, ಕಾಲೇಜಿನ ಅಧ್ಯಾಪಕರು, ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಜಾಥಾದಲ್ಲಿ ಭಾಗವಹಿಸಿದ್ದರು.