

ಗಜೇಂದ್ರಗಡ: ವಾಣಿಜ್ಯ ನಗರಿ, ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಖ್ಯಾತಿಯನ್ನು ಒಡಲೊಳಗೆ ಇಟ್ಟುಕೊಂಡಿರುವ ಗಜೇಂದ್ರಗಡವು ಉತ್ಪಾದನಾ ಚಟುವಟಿಕೆಯಲ್ಲಿ ಅಪಖ್ಯಾತಿಗೆ ಪಾತ್ರವಾಗಿದೆ. ಉದ್ಯೋಗ ಸೃಷ್ಟಿಯ ಮಾತಿರಲಿ, ಊರಿನಲ್ಲಿ ಕೈಗಾರಿಕೆಗಳು ಎಲ್ಲಿವೆ ಎಂಬುದೇ ಯಾರಿಗೂ ಗೊತ್ತಿಲ್ಲ.
ಗದಗ ನಗರದ ನಂತರ ಗಜೇಂದ್ರಗಡ ಪಟ್ಟಣವು ಜಿಲ್ಲೆಯಲ್ಲಿಯೇ ವೇಗವಾಗಿ, ವ್ಯಾಪಕವಾಗಿ ಬೆಳೆಯುತ್ತಿದೆ. ಕೈಗಾರಿಕೆಗಳನ್ನು ಆರಂಭಿಸುವುದರ ಜತೆಗೆ ಮೂಲಸೌಕರ್ಯ ಒದಗಿಸುವುದು, ಕೈಗಾರಿಕೆಗಳ ಉತ್ತೇಜನಕ್ಕೆ ದಾರಿ ಮಾಡಿಕೊಡಬೇಕಾದ ಕೆಲಸವೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕಾರ್ಯೋನ್ಮುಖ ಆಗಬೇಕಿದೆ.
ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ 5 ಎಕರೆ ಜಾಗದಲ್ಲಿ 1991ರಲ್ಲಿ ಕೈಗಾರಿಕಾ ವಸಾಹತು ಆರಂಭಿಸಲಾಯಿತು. ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಭಿವೃದ್ಧಿ ಪಡಿಸಿದ ಈ ಕೈಗಾರಿಕಾ ವಸಾಹತುವಿನಲ್ಲಿ ಒಟ್ಟು 43 ನಿವೇಶನಗಳಿವೆ. ಕಳೆದ 33 ವರ್ಷಗಳಿಂದ ಮತ್ತೊಂದು ಕೈಗಾರಿಕಾ ಎಸ್ಟೇಟ್ ಆರಂಭಿಸುವ ಪ್ರಯತ್ನಗಳು ಕೈಗೂಡಿಲ್ಲ. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಇಲ್ಲಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ಸ್ಟೀಲ್, ಮರಗೆಲಸ, ಯಂತ್ರೋಪಕರಣಗಳ ದುರಸ್ತಿ- ಬಿಡಿ ಭಾಗಗಳ ತಯಾರಿಕೆಗಾಗಿ ವಸಾಹತುವಿನಲ್ಲಿ ಜಾಗ ಕಲ್ಪಿಸಬಹುದಾಗಿದೆ. ಆದರೆ, ಸಣ್ಣ ಉದ್ಯಮಗಳು ನಗರದೆಲ್ಲೆಡೆ ಚದುರಿವೆ. ಅವುಗಳ ಮಾಲೀಕರು ವಿದ್ಯುತ್ ಸಬ್ಸಿಡಿ, ಸಾಲಸೌಲಭ್ಯ ಸೇರಿ ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಪರಿಣಾಮ ಈಗಿರುವ ಎಸ್ಟೇಟ್ ಸಾಲದು ಎಂಬ ವಾದ ಮುಂದಿಡುತ್ತಾರೆ ಉದ್ಯಮಿಗಳು.
ಏನೇನು ಇವೆ: ಕುಷ್ಟಗಿ ಮಾರ್ಗದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಇಂಡಸ್ಟ್ರಿಯಲ್ ಏರಿಯಾಕ್ಕೆ ಸರಕು ಸಾಗಣಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ. ಕಟ್ಟಿಗೆ ಪುಡಿ ತಯಾರಿಕಾ ಘಟಕ, ಅಲ್ಯೂಮಿನಿಯಂ ಕಾರ್ಖಾನೆ, ಐಸ್ ಪ್ಯಾಕ್ಟರಿ, ವೆಲ್ಡಿಂಗ್ ಕಂಪನಿ ಸೇರಿ ಅನೇಕ ಘಟಕಗಳಿವೆ. ಪೆಟ್ರೋಲ್ ಬಂಕ್ ಸಹ ಕೈಗಾರಿಕಾ ಪ್ರದೇಶದಲ್ಲಿರುವುದು ವಿಶೇಷ. ಮಾಲಿನ್ಯ, ಪರಿಸರಕ್ಕೆ ಮಾರಕವಾದ ಯಾವುದೇ ಉದ್ಯಮಗಳು ಇಲ್ಲಿಲ್ಲ. ಸುತ್ತಲಿನ ವಸತಿ ಬಡಾವಣೆಗಳಿಗೂ ಯಾವುದೇ ತೊಂದರೆ ಉಂಟಾಗಿಲ್ಲ.
ನೀಗದ ನಿರುದ್ಯೋಗ: ಪಟ್ಟಣದಲ್ಲಿ ಸರಿಯಾಗಿ ಉದ್ಯೋಗ, ಉದ್ಯೋಗಕ್ಕೆ ತಕ್ಕಂತೆ ಆದಾಯ ಸಿಗದ ಹಿನ್ನೆಲೆಯಲ್ಲಿ ಗಜೇಂದ್ರಗಡ ಸೇರಿ ತಾಲೂಕಿನಲ್ಲಿ ಹಲವಾರು ಜನರು ವಿದ್ಯಾವಂತರು ಮಂಗಳೂರು, ಗೋವಾ, ಬೆಂಗಳೂರಿಗೆ ದುಡಿಯಲು ಹೋಗುತ್ತಿದ್ದಾರೆ. ಪಕ್ಕದ ಜಿಲ್ಲೆ ಕೊಪ್ಪಳದಲ್ಲಿ ಸ್ಥಾಪನೆಯಾದ ಬೃಹತ್ ಕಾರ್ಖಾನೆಯಲ್ಲಿ ತಾಲೂಕಿನ ಐಟಿಐ, ಡಿಪ್ಲೊಮಾ ಕಲಿತ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಿದ್ದಾರೆ.
ಜನರಿಗೆ ತೊಂದರೆ ಆಗದೇ ಇರುವ ಜಾಗದಲ್ಲಿ ಉದ್ಯಮ ಮಾಡಬಹುದು. ಆದರೆ, 8 ಎಚ್.ಪಿಗಿಂತ ಜಾಸ್ತಿ ವಿದ್ಯುತ್ ಬಳಸುವ ಉದ್ಯಮಗಳು ಇಂಡಸ್ಟ್ರೀಯಲ್ ಏರಿಯಾಗಳಲ್ಲಿಯೇ ಇರಬೇಕು ಎಂಬ ನಿಯಮವಿದೆ. ಆದರೆ ಪಟ್ಟಣದಲ್ಲಿ ಇದು ಪಾಲನೆಯಾಗುತ್ತಿಲ್ಲ ಎಂಬ ಆರೋಪವೂ ಇದೆ.
ದೂರು: ಕೈಗಾರಿಕೆ ಸ್ಥಾಪನೆಯಲ್ಲಿ ಸರ್ಕಾರದ ನಿರ್ಲಕ್ಷ್ಯಂದ ಅನೇಕ ಉದ್ಯಮಿಗಳು ಬೇಸತ್ತಿಗಿದ್ದಾರೆ. ವೆಲ್ಡಿಂಗ್ ಕಂಪನಿ, ಕಟ್ಟಿಗೆ ಕೊರೆಯುವ ಯಂತ್ರಗಳ ಕರ್ಕಶ ಶಬ್ದದಿಂದಾಗಿ ದೂರು ನೀಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಲವರು ದೂರಿದ್ದಾರೆ.
ಹಿಂದೇಟು ಯಾಕೆ?
ಹತ್ತಿ ತಾಲೂಕಿನ ಪ್ರಮುಖ ಬೆಳೆಯಾಗಿದೆ. ಪಟ್ಟಣದ ಸುತ್ತಮುತ್ತ ಹತ್ತಾರು ಜಿನ್ನಿಂಗ್ ಮಿಲ್ಗಳು ಪ್ರಾರಂಭವಾಗಿವೆ. ಹತ್ತಿ ಮಿಲ್ಗಳನ್ನು ಪ್ರಾರಂಭಿಸಲು ಬೇರೆ ರಾಜ್ಯದ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಒಂದು ಹತ್ತಿ ಮಿಲ್ ಸ್ಥಾಪಿಸಲು ಕನಿಷ್ಠ 2 ಎಕರೆ ಜಾಗವಾದರೂ ಬೇಕು. ಆದರೆ ಗಜೇಂದ್ರಗಡ ಕೈಗಾರಿಕಾ ವಸಾಹತು ಇರುವುದೇ ಕೇವಲ 5 ಎಕರೆ ಪ್ರದೇಶದಲ್ಲಿ. ಹೀಗಾಗಿ ಯಾವ ಕೈಗಾರಿಕೆಗಳು ಇಲ್ಲಿ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ ಉದ್ಯಮಿಗಳು.
ಗಜೇಂದ್ರಗಡ ಪಟ್ಟಣ ದೊಡ್ಡದಾಗಿ ಬೆಳೆಯುತ್ತಿದೆ. ಇಲ್ಲಿರುವ ಕೈಗಾರಿಕಾ ನಿವೇಶನಗಳು ಸಾಲುತ್ತಿಲ್ಲ. ಹೊಸ ಉದ್ಯಮಗಳು ಪ್ರಾರಂಭವಾಗುತ್ತಿಲ್ಲ. ಇರುವ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಕೈಗಾರಿಕಾ ನಿಗಮದವರು ರಸ್ತೆ, ವಿದ್ಯುತ್, ಚರಂಡಿ ಸೇರಿ ಎಲ್ಲ ವ್ಯವಸ್ಥೆ ಮಾಡಿ ಪುರಸಭೆಗೆ ಹಸ್ತಾಂತರಿಸಿದರೂ ಪುರಸಭೆಯಿಂದ ಸೌಕರ್ಯ ಒದಗಿಸುತ್ತಿಲ್ಲ. ಕುಡಕರ ಹಾವಳಿಯೂ ವಿಪರೀತವಾಗಿದೆ. ಹೀಗಾಗಿ 20 ಎಕರೆ ವಿಸ್ತೀರರ್ಣದಲ್ಲಿ ಕೈಗಾರಿಕೆ ಎಸ್ಟೇಟ್ ನಿರ್ವಿುಸಿದರೆ ಬಹಳ ಉದ್ಯಮಗಳು ಪಟ್ಟಣಕ್ಕೆ ಬರಲಿವೆ. ಸ್ಥಳೀಯರಿಗೆ ಉದ್ಯೋಗವೂ ಸಿಗಲಿವೆ.
ಬಾಹುಬಲಿ ಹೂಲಿ, ಉದ್ಯಮಿ ಗಜೇಂದ್ರಗಡ