ನೋಡ ಬನ್ನಿ ಈ ಸರ್ಕಾರಿ ಶಾಲೆ..!

Renovated Government Senior Primary School, Shigikeri, Bagalkote Taluk
ಬಾಗಲಕೋಟೆ ತಾಲೂಕಿನ ಶೀಗಿಕೇರಿಯ ನವೀಕರಣಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೃಶ್ಯ.
Published on

ಬಾಗಲಕೋಟೆ: ಖಾಸಗಿ ಶಾಲೆಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ದೇವರೇ ಬಲ್ಲ. ಮಳೆ, ಬಿಸಿಲು ಏನೇ ಇದ್ದರೂ ಸರ್ಕಾರಿ ಶಾಲೆಗಳ ಸ್ಥಿತಿ ಅಯೋಮಯ. ಆದರೆ ಇಲ್ಲೊಬ್ಬ ಕವಿ, ನಾಟಕಕಾರ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳವರೂ ನಾಚುವಂತೆ ಶಾಲೆಯ ಮೆರಗು ಹೆಚ್ಚಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದಾರೆ.

ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಸ್ಪರ್ಶ ಸಿಕ್ಕಿದೆ. ನವ ವಧುವಿನಂತೆ ಶೃಂಗಾರಗೊಡು ಮಕ್ಕಳು, ಪಾಲಕರ ಗಮನ ಸೆಳೆಯುತ್ತಿದೆ. ಇದೇ ಗ್ರಾಮದ ಕವಿ, ನಾಟಕಗಾರ ಎಚ್.ಎಚ್. ಶೇಬನ್ನವರ ತಮ್ಮ 43ನೇ ಜನುಮ ಹಿನ್ನೆಲೆಯಲ್ಲಿ ಮಾಡಿದ ಸೇವಾ ಕಾರ್ಯಕ್ಕೆ ಗ್ರಾಮವೇ ಸಂತಸಗೊಂಡಿದೆ.

ಕವಿ ತಾವು ಮಾಡಿದ ಸೇವಾ ಕಾರ್ಯ ಹೇಳಿಕೊಂಡಿಲ್ಲ. ನವೀಕರಣಗೊಂಡ ಸರ್ಕಾರಿ ಶಾಲೆ ಹಸ್ತಾಂತರ ಕಾರ್ಯಕ್ರಮದಲ್ಲಿಯೂ ಭಾಗವಹಿಸಿಲ್ಲ. ಸೇವಾಗುಣದಿಂದಲೇ ಇತರರಿಗೆ ಮಾದರಿಯಾಗಿದ್ದಾರೆ.

ಗ್ರಾಮೀಣ ಪ್ರದೇಶದ ಶಾಲೆಗಳು ಒಂದಿಲ್ಲೊಂದು ಸಮಸ್ಯೆಗಳ ಸುಳಿಗೆ ಸಿಲುಕಿ ಒದ್ದಾಡುತ್ತೀವೆ. ಸರ್ಕಾರದ ಅನುದಾನ ಖರ್ಚು ಮಾಡಿದರೂ ಶಾಲೆಗಳ ಸುಧಾರಣೆ ಕನಸಿನ ಮಾತಾಗಿ ಉಳಿದಿದೆ. ಆದರೆ ಕವಿ ಎಚ್.ಎನ್. ಶೇಬನ್ನವರ ತಮ್ಮ ವೈಯಕ್ತಿಕವಾಗಿ 5 ಲಕ್ಷ ರೂ. ಖರ್ಚು ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅನೇಕ ಬದಲಾವಣೆ ತಂದಿದ್ದಾರೆ.

ಮೊದಲು ಶಾಲೆಯ ಸುತ್ತಮುತ್ತಲಿನ ಆವರಣ ಗಲೀಜು ತುಂಬಿಕೊಂಡಿತ್ತು. ಗಬ್ಬೆದ್ದ ವಾತಾವರಣದಲ್ಲಿಯೇ ಮಕ್ಕಳು ಕಲಿಯುವಂತಾಗಿತ್ತು. ಅಲ್ಲದೆ ಶಾಲೆ ವಾತಾವರಣದಲ್ಲಿರುವ ಕೊಕಟನೂರ ಯಲ್ಲಮ್ಮದೇವಿ ದೇವಸ್ಥಾನ ಸುತ್ತಲು ಕಸ ತುಂಬಿಕೊಂಡಿತ್ತು. ಅದನ್ನೆಲ್ಲಾ ಸ್ವಚ್ಛಗೊಳಿಸಿದ್ದು, ಸುಮಾರು 15 ಟ್ಯಾಕ್ಟರ್‌ನಷ್ಟು ಕಸವನ್ನು ತೆಗೆಸಿಹಾಕಿಸಿದ್ದಾರೆ. ಶಾಲೆಗೆ ಹೊಸ ಕಂಪೌಂಡ್ ನಿರ್ಮಿಸಿದ್ದಾರೆ. ದೇವಸ್ಥಾನಕ್ಕೂ ಹೊಸದಾಗಿ ಛತ್ರ ನಿರ್ಮಿಸಿದ್ದಾರೆ. ಶಾಲೆಯ ಮುಖ್ಯದ್ವಾರ ಸೇರಿದಂತೆ ವಿವಿಧ ಭಾಗದಲ್ಲಿ ಸುಣ್ಣ-ಬಣ್ಣ ಬಳೆಸಿದ್ದಾರೆ.

ದಾರ್ಶನಿಕರ ಭಾವಚಿತ್ರ: ಶಾಲೆಯ ಕಂಪೌಂಡ್, ದೇವಾಲಯದ ಗೋಡೆಗಳ ಮೇಲೆ ನಾಡಿನ ಶ್ರೇಷ್ಠ ಸಂತ, ಸಂಗೀತಗಾರರ ಭಾವಚಿತ್ರ ಬಿಡಿಸಲಾಗಿದೆ. ಗದಗಿನ ಪುಟ್ಟರಾಜ ಗವಾಯಿಗಳು, ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಮುಂತಾದ ಮಹಾನ್ ದಾರ್ಶನಿಕರ ಚಿತ್ರ ಬಿಡಿಸಲಾಗಿದೆ. ಅಲ್ಲದೆ ಗ್ರಾಮೀಣ ಕ್ರೀಡೆಗಳನ್ನು ನೆನಪಿಸುವ ಚಿತ್ರಗಳು, ಮಕ್ಕಳ ಕಲಿಕೆಗೆ ಪೂರಕವಾಗುವ ವಿವಿಧ ಚಿತ್ರಗಳನ್ನು ಬಿಡಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net