

ಹಿರೀಸಾವೆ: ನಿಸರ್ಗದ ಹಿಂದೆ ನಿಂತು ಜಗತ್ತನ್ನು ಮುನ್ನಡೆಸುವ ಅದ್ಭುತವಾದ ಮಹಾನ್ ಶಕ್ತಿಯೊಂದಿದೆ ಎನ್ನುವುದು ಅಕ್ಷರಶಃ ಸತ್ಯ ಎಂದು ಮಾಗಡಿಯ ಜಡೆದೇವರ ಮಠದ ಪೀಠಾಧಿಪತಿ ಶ್ರೀ ಇಮ್ಮಡಿ ಬಸವರಾಜೇಂದ್ರ ಸ್ವಾಮೀಜಿ ಹೇಳಿದರು.
ಹೋಬಳಿಯ ಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಸನ್ನಿಧಿಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಆ ಶಕ್ತಿಯನ್ನು ನೋಡುವುದಿರಲಿ ಊಯಿಸಿಕೊಳ್ಳಲು ಸಹ ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ನಾನು ದೊಡ್ಡವನು, ನನ್ನಿಂದಲೇ ಎಲ್ಲ ಎಂದುಕೊಂಡು ಇಲ್ಲದ ಭ್ರಮೆಯಲ್ಲಿ ಮೆರೆಯುವ ಸಾಕಷ್ಟು ಜನರಿದ್ದಾರೆ. ಅದು ನಿಜವಾದ ಸಾರ್ಥಕತೆಯ ಬದುಕಲ್ಲ ಎಂಬುದನ್ನು ಅವರು ತಿಳಿಯಬೇಕಿದೆ. ಅಶಿಸ್ತಿನ ಬದುಕನ್ನು ತೊರೆದು ನಿಸ್ವಾರ್ಥದೊಂದಿಗೆ ಸದ್ಮಾರ್ಗದಲ್ಲಿ ನಡೆದರೆ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ ಎಂದರು.
ಪ್ರಕೃತಿಯ ಮಡಿಲಲ್ಲಿ ಉಸಿರನ್ನು ಸಾಲವಾಗಿ ಪಡೆದು ಬಂದಿರುವ ನಾವು ಹಿಂದಿರುಗುವಾಗ ಅದರ ಸಾಲವನ್ನು ಮರುಪಾವತಿಸಿಯೇ ಪಯಣಿಸಬೇಕು. ಆದರೆ ಇದ್ದು ಹೋಗುವ ನಡುವಿನ ದಿನಗಳಲ್ಲಿ ನಮ್ಮ ಬದುಕಿನ ಶೈಲಿ, ಆಚರಣೆ ಹಾಗೂ ಅಳವಡಿಸಿಕೊಳ್ಳುವ ಮೌಲ್ಯಯುತ ಜೀವನ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಇರಬೇಕು ಎಂದು ತಿಳಿಸಿದರು.
ನಾನು ಎಷ್ಟೆಲ್ಲ ದುಡಿದಿದ್ದೇನೆ, ಏನೆಲ್ಲಾ ಸಂಪಾದಿಸಿದ್ದೇನೆ ಎಂದು ಏಣಿಸುವ ಬದಲು ದುಡಿದ ಹಣವನ್ನು ಯಾವ ಧರ್ಮ ಕಾರ್ಯಕ್ಕೆ ಎಷ್ಟು ಉಪಯೋಗಿಸಿದ್ದೇನೆ ಎಂಬುದು ಮುಖ್ಯವಾಗಿರುತ್ತದೆ. ಕೂಡಿಟ್ಟು ಸ್ವಾರ್ಥದ ಬದುಕು ನಡೆಸುವುದಕ್ಕಿಂತ ಧರ್ಮ ಕಾರ್ಯಗಳಿಗೆ ನಿಸ್ವಾರ್ಥದಿಂದ ಬಳಸುವುದು ಯೋಗ್ಯ ಎಂದು ಮಾರ್ಗದರ್ಶನ ನೀಡಿದರು.
ಸಮಾಜ ಅಥವಾ ವ್ಯಕ್ತಿತ್ವವನ್ನು ಕಳೆಗುಂದಿಸುವ ಅವ್ಯವಸ್ಥೆಯನ್ನು ಸೃಷ್ಟಿಸುವ ಬದಲು ವ್ಯಕ್ತಿತ್ವವನ್ನು ವಿಕಸನಗೊಳಿಸುವ ಧರ್ಮ ಕೇಂದ್ರಗಳನ್ನು ತೆರೆಯಬೇಕು. ಜತೆಗೆ ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಯುವ ಪೀಳಿಗೆಯ ಮನಸ್ಸಿನಲ್ಲಿ ಧಾರ್ಮಿಕ ಮನೋಭಾವ ಬೆಳೆಸುವ ಕೆಲಸ ನಡೆಯಬೇಕು ಎಂದರು.
ಇದಕ್ಕೂ ಮೊದಲು ಸನ್ನಿಧಿಯ ಆವರಣದಲ್ಲಿ ತೆಂಗಿನ ಸಸಿಯನ್ನು ನೆಡುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಕೆಂಗೇರಿ ಬಂಡೆಮಠದ ಶ್ರೀ ಸಚ್ಚಿದಾನಂದ ಶಿವಾಚಾರ್ಯ ಸ್ವಾಮೀಜಿ, ದೇಗುಲದ ಧರ್ಮದರ್ಶಿ ಚಂದ್ರಣ್ಣ, ಗ್ರಾಪಂ ಸದಸ್ಯ ಪಿ.ಎಸ್.ಶಿವಶಂಕರ್, ಪುರ ಹಾಗೂ ಬುರುಡೆಘಟ್ಟ ಗ್ರಾಮದ ಭಕ್ತರು ಇದ್ದರು.